ಸಿಜೆಐ ಡಿ.ವೈ.ಚಂದ್ರಚೂಡ್ 
ಸುದ್ದಿಗಳು

ಪ್ರಕರಣದ ವಿಳಂಬವಾದರೆ ಪುರುಷ ನ್ಯಾಯವಾದಿಗಳಿಗಿಂತಲೂ ಮಹಿಳಾ ವಕೀಲರ ಮೇಲೆ ಹೆಚ್ಚು ಪರಿಣಾಮ: ಸಿಜೆಐ ಚಂದ್ರಚೂಡ್‌

ಮುಂಬೈನಲ್ಲಿ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯ ಹೊಸ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಿಜೆಐ.

Bar & Bench

ಪ್ರಕರಣವೊಂದರ ತೀರ್ಪು ಬರುವಲ್ಲಿ ಉಂಟಾಗುವ ವಿಳಂಬ ಪುರುಷ ವಕೀಲರಿಗಿಂತಲೂ ಮಹಿಳಾ ನ್ಯಾಯವಾದಿಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಶುಕ್ರವಾರ ಅಭಿಪ್ರಾಯಪಟ್ಟರು.

ಮುಂಬೈನಲ್ಲಿ ಕೇಂದ್ರೀಯ ಆಡಳಿತ ನ್ಯಾಯಮಂಡಳಿಯ ಹೊಸ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೀರ್ಘಕಾಲೀನ ನ್ಯಾಯಾಂಗ ಹೋರಾಟ ಕಕ್ಷಿದಾರರಿಗೆ ಕಠಿಣವಾಗಿರಲಿದ್ದು ಅದು ಪುರುಷ ವಕೀಲರಿಗಿಂತ ಮಹಿಳಾ ವಕೀಲರ ಕಕ್ಷಿದಾರರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಸಮಯೋಚಿತವಾಗಿ ತೀರ್ಪು ಪಡೆಯಲಾಗದೇ ಇರುವುದು ಪುರುಷ ಮತ್ತು ಮಹಿಳಾ ವಕೀಲರಿಬ್ಬರ ಪ್ರಾಕ್ಟೀಸ್‌ ಮೇಲೆ ಪರಿಣಾಮ ಬೀರಬಹುದು. ಆದರೆ ಸಮಾನತೆ ಇಲ್ಲದ, ಬುದ್ಧಿವಂತಿಕೆ ಮತ್ತು ಸಾಮರ್ಥವ್ಯವನ್ನು ವ್ಯಕ್ತಿಯ ಲಿಂಗದೊಂದಿಗೆ ಸಮೀಕರಿಸುವಂತಹ ಸಮಾಜದಲ್ಲಿ ಇಂತಹ ವಿಳಂಬದ ಪರಿಣಾಮ ಪುರುಷ ವಕೀಲರಿಗಿಂತ ಮಹಿಳಾ ವಕೀಲರ ಮೇಲೆ ಹೆಚ್ಚಿರುತ್ತದೆ.

  • ಮಹಿಳಾ ನ್ಯಾಯವಾದಿ ನ್ಯಾಯಾಲಯದಲ್ಲಿ ತನ್ನ ಎದುರಾಳಿಯ ವಿರುದ್ಧವಷ್ಟೇ ಹೋರಾಟ ಮಾಡುತ್ತಿರುವುದಿಲ್ಲ ಬದಲಿಗೆ ವಕೀಲಳಾಗುವ ತನ್ನ ಸಹಜ ಸಾಮರ್ಥ್ಯದ ಬಗ್ಗೆ ವರ್ಷಗಳಿಂದ ಇರುವ ಲಿಂಗಾಧಾರಿತ ಗ್ರಹಿಕೆಗಳನ್ನೂ ಎದುರಿಸುತ್ತಾಳೆ.

  • ಸಾಮಾಜಿಕ, ಭೌತಿಕ ಮತ್ತು ವ್ಯವಸ್ಥಿತ ಅಡೆತಡೆಗಳು ಸೇರಿದಂತೆ ನ್ಯಾಯಕ್ಕೆ ವಿವಿಧ ಅಡೆತಡೆಗಳಿವೆ. ಆದರೂ ಉತ್ತಮ ಮೂಲಸೌಕರ್ಯ ಈ ಅಡೆತಡೆಗಳನ್ನು ಕಡಿಮೆ ಮಾಡಿ ವ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಆಲಿಸಲು ಮತ್ತು ಪ್ರಕರಣಗಳ ತುರ್ತು ವಿಲೇವಾರಿಗೆ ಸಹಾಯ ಮಾಡುತ್ತದೆ.

  • ಹೆಚ್ಚಿನ ವಕೀಲರು ಈಗ ನ್ಯಾಯಮಂಡಳಿಗಳಲ್ಲಿ ಸ್ವಯಂಪ್ರೇರಿತವಾಗಿ ಕೆಲಸ ಮಾಡುತ್ತಿದ್ದು ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಯ ಬೇಡಿಕೆಗಳನ್ನು ಪರಿಹರಿಸುವಂತಹ ಮೂಲಸೌಕರ್ಯ ಒಳಗೊಳ್ಳುವುದು ಈಗ ನಿರ್ಣಾಯಕವಾಗಿದೆ .

  • ಕಕ್ಷಿದಾರರು ದೈಹಿಕವಾಗಿ ಅಂಗವಿಕಲರು ಅಥವಾ ಹಿರಿಯ ನಾಗರಿಕರಾಗಿದ್ದಾಗ. ವರ್ಚುವಲ್‌ ನ್ಯಾಯಾಲಯಗಳೇ ನ್ಯಾಯ ಪಡೆಯುವ ಏಕೈಕ ಮಾಧ್ಯಮವಾಗಬಾರದು. ನ್ಯಾಯಾಲಯಗಳಿಗೆ ಭೌತಿಕ ಪ್ರವೇಶ ಒದಗಿಸುವುದನ್ನು ಎಂದಿಗೂ ಕಡೆಗಣಿಸಬಾರದು.