High Court of Karnataka 
ಸುದ್ದಿಗಳು

ಕೈಗಾರಿಕಾ ನ್ಯಾಯಾಧಿಕರಣಕ್ಕೆ ಪೀಠಾಸೀನ ಅಧಿಕಾರಿ ನೇಮಕ ವಿಳಂಬ: ಕೇಂದ್ರ ಸರ್ಕಾರಕ್ಕೆ ದಂಡದ ಎಚ್ಚರಿಕೆ ನೀಡಿದ ಹೈಕೋರ್ಟ್‌

ನ್ಯಾಯಿಕ ಮತ್ತು ಅರೆನ್ಯಾಯಿಕ ಸಂಸ್ಥೆಗಳ ಹುದ್ದೆಗಳನ್ನು ದೀರ್ಘಕಾಲದವರೆಗೆ ಖಾಲಿ ಬಿಟ್ಟರೆ ನ್ಯಾಯ ಪಡೆಯಬಯಸುವವರನ್ನು ಅದರಿಂದ ವಂಚಿರನ್ನಾಗಿ ಮಾಡಿದಂತೆ ಎಂದಿರುವ ನ್ಯಾಯಾಲಯ.

Bar & Bench

ಕೇಂದ್ರ ಸರ್ಕಾರದ ಕೈಗಾರಿಕಾ ನ್ಯಾಯಾಧಿಕರಣ (ಕಾರ್ಮಿಕ ನ್ಯಾಯಾಲಯ) ಬೆಂಗಳೂರು ಇದರ ಪೀಠಾಸೀನಾಧಿಕಾರಿಯ ನೇಮಕಾತಿಯ ವಿಚಾರದಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಮುಂದಿನ ಮೂರು ವಾರಗಳಲ್ಲಿ ಈ ಸಂಬಂಧ ಸಕಾರಾತ್ಮಕ ಕ್ರಮ ಕೈಗೊಳ್ಳದಿದ್ದರೆ 10 ಲಕ್ಷ ರೂಪಾಯಿ ದಂಡ ತೆರಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಬುಧವಾರ ಎಚ್ಚರಿಸಿದೆ.

ಕೈಗಾರಿಕಾ ಕಾನೂನು ಅಭ್ಯಾಸಕಾರರ ವೇದಿಕೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೇಂದ್ರ ಸರ್ಕಾರದ ಪರ ವಾದಿಸಿದ ವಕೀಲರು, “ಕೈಗಾರಿಕಾ ನ್ಯಾಯಾಧಿಕರಣಕ್ಕೆ ಪೀಠಾಸೀನಾಧಿಕಾರಿಯಾಗಿ ಒಬ್ಬರನ್ನು 2022ರ ಆಗಸ್ಟ್‌ 18ರಂದು ನೇಮಕ ಮಾಡಲಾಗಿತ್ತು. ಆದರೆ, ಅವರು ಅಧಿಕಾರ ವಹಿಸಿಕೊಂಡಿಲ್ಲ. ಹೀಗಾಗಿ ಹೊಸದಾಗಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಆ ಪ್ರಕ್ರಿಯೆ ಕೇಂದ್ರ ಸಂಪುಟದ ನೇಮಕಾತಿ ಸಮಿತಿ ಹಂತದಲ್ಲಿದೆ. ಎರಡು ವಾರ ಕಾಲಾವಕಾಶ ಕೊಟ್ಟರೆ ವಸ್ತುಸ್ಥಿತಿಯನ್ನು ನ್ಯಾಯಾಲಯಕ್ಕೆ ತಿಳಿಸಲಾಗುವುದು” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಅರ್ಜಿದಾರರು ಹೇಳುವಂತೆ ಕಳೆದ ಮೂರು ವರ್ಷಗಳಿಂದ ಪೀಠಾಸೀನಾಧಿಕಾರಿ ಹುದ್ದೆ ಖಾಲಿ ಇದೆ. ಈ ರೀತಿ ನ್ಯಾಯಿಕ ಮತ್ತು ಅರೆನ್ಯಾಯಿಕ ಸಂಸ್ಥೆಗಳ ಹುದ್ದೆಗಳನ್ನು ದೀರ್ಘಕಾಲದವರೆಗೆ ಖಾಲಿ ಬಿಟ್ಟರೆ ನ್ಯಾಯ ಪಡೆಯಬಯಸುವವರನ್ನು ಅದರಿಂದ ವಂಚಿರನ್ನಾಗಿ ಮಾಡಿದಂತೆ. ನ್ಯಾಯದಾನದ ಸಮತೆಯ ಉದ್ದೇಶಕ್ಕೆ ಇದು ಅಡ್ಡಿಯಾಗಲಿದೆ. ಈ ರೀತಿಯ ವಿಳಂಬ ನಿರ್ದಿಷ್ಟ ಕ್ಷೇತ್ರದ ನ್ಯಾಯ ಆಪೇಕ್ಷಿತರ ಕನಸು ಕನಸಾಗಿಯೇ ಉಳಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಮೌನ ಪ್ರೇಕ್ಷಕ ಆಗಬಾರದು” ಎಂದು ಚಾಟಿ ಬೀಸಿತು.

ಅಲ್ಲದೇ, ಎರಡು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸುವುದಾಗಿ ಕೇಂದ್ರ ಸರ್ಕಾರದ ಪರ ವಕೀಲರು ಹೇಳಿದ್ದಾರೆ. ಇದು ಕಣ್ಣೊರೆಸುವ ತಂತ್ರ ಎಂಬುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕ್ರಮ ಕೈಗೊಳ್ಳುವ ಬದಲು ಕಾಗದದ ಮೇಲೆ ಕುದುರೆ ಓಡಿಸುವುದರಲ್ಲಿ ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇದ್ದಂತಿದೆ ಎಂದು ತರಾಟೆಗೆ ತೆಗೆದುಕೊಂಡ ಪೀಠವು ಇಷ್ಟಾದ ಮೇಲೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗಲಿದೆ ಎಂಬ ವಿಶ್ವಾಸವಿದೆ. ಒಂದೊಮ್ಮೆ ವಿಫಲವಾದಲ್ಲಿ 10 ಲಕ್ಷ ರೂಪಾಯಿ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ನವೆಂಬರ್ 7ಕ್ಕೆ ವಿಚಾರಣೆ ಮುಂದೂಡಿತು.