Delhi air pollution, Supreme Court
Delhi air pollution, Supreme Court  
ಸುದ್ದಿಗಳು

[ದೆಹಲಿ ವಾಯು ಮಾಲಿನ್ಯ] ಸರ್ಕಾರಗಳ ಉದ್ದೇಶ ಒಳ್ಳೆಯದು, ಆದರೆ ಜಾರಿ ಶೂನ್ಯ ಎಂದ ಸುಪ್ರೀಂ ಕೋರ್ಟ್

Bar & Bench

ವಾಯುಮಾಲಿನ್ಯ ತಡೆಗೆ ಕೇಂದ್ರ ಸರ್ಕಾರ ಹೊರಡಿಸಿದ ನಿರ್ದೇಶನಗಳನ್ನು ಸಂಬಂಧಪಟ್ಟ ರಾಜ್ಯಗಳು ಜಾರಿಗೊಳಿಸುವುದಕ್ಕಾಗಿ ಸ್ವತಂತ್ರ ಕಾರ್ಯಪಡೆ ಸ್ಥಾಪಿಸಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ (ಆದಿತ್ಯ ದುಬೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).

ಪಂಜಾಬ್, ಹರ್ಯಾಣ, ದೆಹಲಿ ಹಾಗೂ ಉತ್ತರ ಪ್ರದೇಶ ರಾಜ್ಯಗಳಿಗೆ ವಿವಿಧ ನಿರ್ದೇಶನ ನೀಡುವ ಕೇಂದ್ರ ಸರ್ಕಾರದ ಉದ್ದೇಶ ಉತ್ತಮವಾಗಿದ್ದರೂ, ಅದರ ಜಾರಿ ಮಾತ್ರ ಶೂನ್ಯ ಪ್ರಮಾಣದಲ್ಲಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ಸೂರ್ಯಕಾಂತ್ ಅವರಿದ್ದ ಪೀಠ ಟೀಕಿಸಿತು.

"ಎಲ್ಲಾ ಉದ್ದೇಶಗಳು ಒಳ್ಳೆಯದಿದ್ದು ನಿರ್ದೇಶನಗಳನ್ನು ನೀಡಲಾಗಿದೆ. ಆದರೆ ಅನುಷ್ಠಾನ ಶೂನ್ಯವಾಗಿದೆ. ನಿರ್ದೇಶನಗಳನ್ನು ಜಾರಿಗೊಳಿಸುವುದು ಸಮಸ್ಯೆಯಾಗಿದ್ದು ಯಾರನ್ನಾದರೂ ಜೈಲಿನಲ್ಲಿಡುವುದರಿಂದ ಅಥವಾ ಯಾರ ವಿರುದ್ಧವಾದರೂ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದು (ಅನುಷ್ಠಾನ) ಆಗದಿದ್ದರೆ, ನಾವು ಸ್ವತಂತ್ರ ಕಾರ್ಯಪಡೆಗೆ ಆದೇಶಿಸಬಹುದು" ಎಂದು ಅದು ತಿಳಿಸಿತು.

ಮಾಲಿನ್ಯ ಕಡಿಮೆ ಮಾಡಲು ಕೇಂದ್ರದ ನಿರ್ದೇಶನ ಅನುಸರಿಸದಿರುವುದನ್ನು ಎತ್ತಿ ತೋರಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ನಿರ್ದೇಶನ ಪಾಲಿಸಿರುವ ಕುರಿತು ವರದಿ ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಿದ ಪೀಠ ಪ್ರಕರಣವನ್ನು ಮುಂದೂಡಿತು.

“ನಿರ್ದೇಶನಗಳನ್ನು ಪಾಲಿಸುವ ಸಂಬಂಧ ರಾಜ್ಯ ಸರ್ಕಾರಗಳು ಮತ್ತು ವಕೀಲರಿಗೆ ಅವಕಾಶ ನೀಡಲು ನಾವು ಬಯಸುತ್ತೇವೆ. ಅವರು ಅದನ್ನು ತಕ್ಷಣವೇ ಪಾಲಿಸಿ ಬುಧವಾರ ಸಂಜೆಯೊಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಲಾಗಿದೆ” ಎಂದು ಪೀಠ ತಿಳಿಸಿತು.

ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ ವಿವಿಧ ನಿರ್ದೇಶನಗಳನ್ನು ಈ ತಿಂಗಳ ಆರಂಭದಲ್ಲಿ ನೀಡಿತ್ತು.