Supreme Court, Air Pollution  
ಸುದ್ದಿಗಳು

[ದೆಹಲಿ ವಾಯುಮಾಲಿನ್ಯ] ನಮ್ಮ ಭುಜದ ಮೇಲೆ ಕೋವಿ ಇರಿಸಬೇಡಿ; ನೀವೇ ಕ್ರಮ ಕೈಗೊಳ್ಳಿ: ಸರ್ಕಾರಗಳಿಗೆ ಸುಪ್ರೀಂ ತಪರಾಕಿ

ನಾವು ವಿರೋಧ ಪಕ್ಷದ ನಾಯಕರಲ್ಲ. ಮಾಲಿನ್ಯ ನಿಯಂತ್ರಣ ಮಾತ್ರವೇ ನಮ್ಮ ಗುರಿ ಎಂದು ವಿಚಾರಣೆ ವೇಳೆ ಸಿಜೆಐ ಎನ್‌ ವಿ ರಮಣ ಹೇಳಿದರು,

Bar & Bench

ದೆಹಲಿಯಲ್ಲಿ ವಾಯುಮಾಲಿನ್ಯವನ್ನು ತಡೆಯಲು ಕೇಂದ್ರ ಸರ್ಕಾರ ಮತ್ತು ತಾನು ಸೂಚಿಸಿದ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರಗಳಿಂದ ಲೋಪವುಂಟಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಅತೃಪ್ತಿ ವ್ಯಕ್ತಪಡಿಸಿದೆ [ಆದಿತ್ಯ ದುಬೆ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].

ಮಕ್ಕಳಿಗೆಲ್ಲಾ ಆನ್‌ಲೈನ್‌ ಮೂಲಕ ತರಗತಿ ನಡೆಸುವಂತೆ ಸೂಚಿಸಲಾಗಿದ್ದರೂ ಅವರಿನ್ನೂ ಶಾಲೆಗೆ ಹೋಗುವಂತೆ ಆಗಿರುವುದೇಕೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ಸೂರ್ಯ ಕಾಂತ್ ಅವರ ಪೀಠ ಪ್ರಶ್ನಿಸಿತು.

ಪೀಠ ಹೇಳಿದ ಪ್ರಮುಖ ಅಂಶಗಳು:

  • ನಾವು ಇದನ್ನು ಗಂಭೀರವಾಗಿ ನೋಡುತ್ತಿದ್ದೇವೆ. ಶಾಲೆಗಳನ್ನು ಮುಚ್ಚಲಾಗಿದೆ ಎಂದು ನೀವು ನಮಗೆ ಹೇಳಿದ್ದೀರಿ ಆದರೆ ಹಾಗೆ ಮಾಡಿಲ್ಲ. 3 ರಿಂದ 4 ವರ್ಷದ ಮಕ್ಕಳನ್ನು ಶಾಲೆಗೆ ಹೋಗುವಂತೆ ಮಾಡಲಾಗುತ್ತಿದೆ.

  • ಹಿರಿಯರು ಮನೆಯಿಂದಲೇ ಕೆಲಸ ಮಾಡುವ ಮತ್ತು ಮಕ್ಕಳು ಶಾಲೆಗೆ ಹೋಗವ ಸ್ಥಿತಿ ನಿರ್ಮಾಣವಾಗಿದೆ. ವರ್ಕ್‌ ಫ್ರಂ ಹೋಂ ವ್ಯವಸ್ಥೆ ಮಾಡಲಾಗುವುದು, ಲಾಕ್‌ಡೌನ್‌ಗೂ ಸಿದ್ಧ ಎಂದು ಹಿಂದೆ ಭರವಸೆ ನೀಡಿದ್ದಿರಿ. ಶಾಲಾ ಕಾಲೇಜುಗಳನ್ನೂ ಮುಚ್ಚುವುದಾಗಿ ತಿಳಿಸಿದ್ದೀರಿ ಆದರೆ ಈಗ ಆಗಿರುವುದೇನು?

  • ಗಾಳಿಯ ಗುಣಮಟ್ಟವನ್ನು ಸುಧಾರಿಸುವುದು ನ್ಯಾಯಾಲಯದ ಉದ್ದೇಶ. ನ್ಯಾಯಾಲಯ ಕಾರ್ಯಾಂಗದ ವ್ಯಾಪ್ತಿಗೆ ಲಗ್ಗೆ ಇಡುತ್ತಿದೆ ಎಂದು ಟೀಕಿಸುವವರಿಗಾಗಿ ಈ ಪ್ರತಿಕ್ರಿಯೆ ನೀಡುತ್ತಿದ್ದೇವೆ.

  • ನಾವು ವಿರೋಧ ಪಕ್ಷದ ನಾಯಕರಲ್ಲ. ಮಾಲಿನ್ಯ ನಿಯಂತ್ರಣ ಮಾತ್ರವೇ ನಮ್ಮ ಗುರಿ.

  • ನಮ್ಮ ಭುಜದ ಮೇಲೆ ಕೋವಿಯಿಟ್ಟು ಗುಂಡು ಹಾರಿಸುವಂತಿಲ್ಲ. ನೀವೇ ಕ್ರಮ ಕೈಗೊಳ್ಳಬೇಕು. ನಿಮ್ಮ ಅಧಿಕಾರಶಾಹಿಯಲ್ಲಿ ಕ್ರಿಯಾಶೀಲತೆಯನ್ನು ಜಾಗೃತಗೊಳಿಸಲು ಅಥವಾ ತುಂಬಲು ನಮಗೆ ಸಾಧ್ಯವಿಲ್ಲ. ನೀವು ಕೆಲ ಕ್ರಮಗಳನ್ನು ತೆಗೆದುಕೊಳ್ಳಬೇಕು.

  • ಸರ್ಕಾರ ತೋರಿಕೆಗೆ ಕೆಲಸ ಮಾಡುತ್ತಿದೆಯೇ ವಿನಾ ಅನುಷ್ಠಾನ ನಡೆಯುತ್ತಿಲ್ಲ.

ದೇಶದ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಗ್ಗೆ 17 ವರ್ಷದ ದೆಹಲಿ ವಿದ್ಯಾರ್ಥಿ ಆದಿತ್ಯ ದುಬೆ ಅವರು ಸಲ್ಲಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.