ಸುದ್ದಿಗಳು

[ಟೂಲ್‌ಕಿಟ್‌ ಪ್ರಕರಣ] ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಎಫ್ಐಆರ್ ಪ್ರತಿ ನೀಡುವಂತೆ ಸೂಚಿಸಿದ ದೆಹಲಿ ನ್ಯಾಯಾಲಯ

Bar & Bench

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನೆಯ ಕುರಿತಾದ ಮಾಹಿತಿಯುಳ್ಳ 'ಟೂಲ್‌ಕಿಟ್‌' ಸಿದ್ಧಪಡಿಸಿದ ಆರೋಪ ಎದುರಿಸುತ್ತಿರುವ 21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ಎಫ್‌ಐಆರ್‌ ಪ್ರತಿ ಮತ್ತು ರಿಮಾಂಡ್‌ ಅರ್ಜಿಯ ಪ್ರತಿ ಒದಗಿಸಲು ದೆಹಲಿಯ ನ್ಯಾಯಾಲಯವೊಂದು ಸೂಚಿಸಿದೆ. ಆದರೆ ಎಫ್‌ಐಆರ್‌ ಪ್ರತಿ ಮತ್ತು ರಿಮಾಂಡ್‌ ಅರ್ಜಿಯ ಪ್ರತಿ ನೀಡಲು ದೆಹಲಿ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು.

ಪಟಿಯಾಲಾ ಹೌಸ್‌ ನ್ಯಾಯಾಲಯದ ಚೀಫ್‌ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪಂಕಜ್‌ ಶರ್ಮಾ ಅವರು ದಿಶಾ ಅವರಿಗೆ ಪುಸ್ತಕ, ಬೆಚ್ಚನೆ ಉಡುಗೆ, ವಕೀಲರನ್ನು ಒದಗಿಸಬೇಕು. ಜೊತೆಗೆ ಕುಟುಂಬ ಸದಸ್ಯರೊಡನೆ ಮಾತನಾಡಲು ಅವಕಾಶ ಕಲ್ಪಿಸಬೇಕು ಎಂದೂ ಆದೇಶಿಸಿದ್ದಾರೆ.

ನ್ಯಾಯಾಲಯದ ನಿರ್ದೇಶನದ ಪ್ರಕಾರ ಪ್ರತಿದಿನ ದಿಶಾ ಅವರು ವಕೀಲರೊಂದಿಗೆ 30 ನಿಮಿಷ ಮತ್ತು ತನ್ನ ಕುಟುಂಬದೊಂದಿಗೆ 15 ನಿಮಿಷಗಳ ಕಾಲ ಮಾತನಾಡಲು ಅವಕಾಶವಿರುತ್ತದೆ. ದಿಶಾ ತನ್ನ ವಕೀಲರ ಮೂಲಕ ಈ ಬೇಡಿಕೆಗಳನ್ನಿಟ್ಟಿದ್ದರು. ಆಕೆಯ ಪೊಲೀಸ್‌ ಕಸ್ಟಡಿ ಅವಧಿ ಫೆಬ್ರವರಿ 19 ಕ್ಕೆ ಕೊನೆಗೊಳ್ಳುತ್ತದೆ.