ಬಹುಕೋಟಿ ಗೋವು ಅಕ್ರಮ ಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ನಾಯಕ ಅನುಬ್ರತಾ ಮೊಂಡಲ್ ಅವರನ್ನು ದೆಹಲಿ ನ್ಯಾಯಾಲಯವು ಮಾರ್ಚ್ 10ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ರಾಕೇಶ್ ಕುಮಾರ್ ಅವರು ಮೊಂಡಲ್ ಅವರನ್ನು ಮಾರ್ಚ್ 10ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಆದೇಶಿಸಿದ್ದಾರೆ.
ಗಡಿ ಭದ್ರಾ ಪಡೆಯ (ಬಿಎಸ್‌ಎಫ್) ಸಿಬ್ಬಂದಿಗೆ ಲಂಚ ನೀಡಿ ಗೋವುಗಳನ್ನು ಬಾಂಗ್ಲಾದೇಶಕ್ಕೆ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಮೊಂಡಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೊಂಡಲ್ ಅವರನ್ನು ವಿಮಾನದ ಮೂಲಕ ಮಂಗಳವಾರ ಪಶ್ಚಿಮ ಬಂಗಾಳದಿಂದ ದೆಹಲಿಗೆ ಕರೆದೊಯ್ದು ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಮಾರ್ಚ್ 4ರಂದು ಕಾನೂನು ಪ್ರಕ್ರಿಯೆಗೆ ತಡೆಯೊಡ್ಡಲು ಕಲ್ಕತ್ತಾ ಹೈಕೋರ್ಟ್ ನಿರಾಕರಿಸಿತ್ತು.
ಪ್ರಮುಖ ಆರೋಪಿ ಮೊಹಮ್ಮದ್ ಇನಾಮುಲ್ ಹಕ್, ಆತನ ಸಹಚರರು ಬಿಎಸ್‌ಎಫ್ ಸಿಬ್ಬಂದಿ ಹಾಗೂ ತೆರಿಗೆ ಅಧಿಕಾರಿಗಳ ಜೊತೆಗೂಡಿ ಅಕ್ರಮವಾಗಿ ಗೋವುಗಳನ್ನು ಬಾಂಗ್ಲಾದೇಶಕ್ಕೆ ಪೂರೈಸುತ್ತಿದ್ದರು ಎಂಬುದು ಪ್ರಾಸಿಕ್ಯೂಷನ್ ವಾದವಾಗಿದೆ. ಅಕ್ರಮ ನಡೆಸಲು ಮೊಂಡಲ್ ತಮ್ಮ ಪ್ರಭಾವ ಬಳಸಿಕೊಂಡಿದ್ದು, ಇದಕ್ಕಾಗಿ ಅಕ್ರಮವಾಗಿ ಲಾಭ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಕಳೆದ ವರ್ಷದ ಆಗಸ್ಟ್ 11ರಂದು ಮೊಂಡಲ್‌ರನ್ನು ಬಂಧಿಸಲಾಗಿತ್ತು.
ಜಾರಿ ನಿರ್ದೇಶನಾಲಯವು ದೆಹಲಿ ನ್ಯಾಯಾಲಯದ ಮುಂದೆ ತಮ್ಮನ್ನು ಹಾಜರುಪಡಿಸದಂತೆ ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ನ್ಯಾ. ಬಿಬೇಕ್ ಚೌಧರಿ ಅವರು ಕಳೆದ ಶನಿವಾರ ತಿರಸ್ಕರಿಸಿದ್ದರು.