Brij Bhushan Sharan Singh and Rouse avenue court 
ಸುದ್ದಿಗಳು

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಸಂಸದ ಬ್ರಿಜ್ ಭೂಷಣ್ ವಿರುದ್ಧದ ತನಿಖೆಯ ಸ್ಥಿತಿಗತಿ ವರದಿ ಕೇಳಿದ ದೆಹಲಿ ಕೋರ್ಟ್

ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ನಡೆಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋದ ಕುಸ್ತಿಪಟುಗಳು ಸಿಆರ್‌ಪಿಸಿ ಸೆಕ್ಷನ್ 164 ರ ಅಡಿ ತಮ್ಮ ಹೇಳಿಕೆ ದಾಖಲಿಸಿಕೊಳ್ಳುವಂತೆ ಕೋರಿದ್ದಾರೆ.

Bar & Bench

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೈಗೊಳ್ಳಲಾಗಿರುವ ಕ್ರಮದ ಕುರಿತಂತೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ದೆಹಲಿ ನ್ಯಾಯಾಲಯ ಬುಧವಾರ ದೆಹಲಿ ಪೊಲೀಸರಿಗೆ ಸೂಚಿಸಿದೆ.

ಸ್ಥಿತಿಗತಿ ವರದಿ ಕೋರಿ ಕುಸ್ತಿಪಟುಗಳು ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ರೌಸ್‌ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್‌ಪಾಲ್‌ ಅವರು ನೋಟಿಸ್ ನೀಡಿದರು. ಮೇ 12ಕ್ಕೆ ನ್ಯಾಯಾಲಯ ಪ್ರಕರಣದ ವಿಚಾರಣೆ ಮುಂದೂಡಿದೆ.   

ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ನಡೆಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋದ ಕುಸ್ತಿಪಟುಗಳು ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ತಮ್ಮ ಹೇಳಿಕೆ ದಾಖಲಿಸಿಕೊಳ್ಳುವಂತೆ ವಿನಂತಿಸಿದ್ದರು.

ಅಲ್ಲದೆ ಅರ್ಜಿದಾರರು ತನಿಖೆಯ ಕ್ರಮ ಕೈಗೊಂಡ ವರದಿ ಕೇಳಿದ ಬಳಿಕ ನ್ಯಾಯಾಲಯ ಬುಧವಾರ ನೋಟಿಸ್ ನೀಡಿದೆ. ಕುಸ್ತಿಪಟುಗಳ ಪರ ವಕೀಲರಾದ ಡಾ.ಎಸ್.ಎಸ್.ಹೂಡಾ, ಅನಿಂದ್ಯಾ ಮಲ್ಹೋತ್ರಾ, ಶೌರ್ಯ ಲಂಬಾ, ನಂದಿತಾ ಹೂಡಾ ಮತ್ತು ರಾಶಿ ಚೌಧರಿ ವಾದ ಮಂಡಿಸಿದರು.

ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಕುಸ್ತಿಪಟುಗಳು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆಗ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳುವುದಾಗಿ ತಿಳಿಸಿದ್ದರು. ತರುವಾಯ ಎಫ್‌ಐಆರ್ ದಾಖಲಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಜೊತೆಗೆ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.

ಪೊಲೀಸರು ನೀಡಿದ್ದ ಭರವಸೆಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಆ ಸಂದರ್ಭದಲ್ಲಿ ದೂರುದಾರರಿಗೆ ಭದ್ರತೆ ಒದಗಿಸುವಂತೆ ತಾನು ಈ ಹಿಂದೆ ನೀಡಿದ್ದ ನಿರ್ದೇಶನವನ್ನು ದೆಹಲಿ ಪೊಲೀಸರು ಪಾಲಿಸುತ್ತಿರುವುದನ್ನು ನ್ಯಾಯಾಲಯ ಗಮನಿಸಿತ್ತು.

ಅರ್ಜಿದಾರರು ಯಾವುದೇ ಪರಿಹಾರ ಕೋರಿ ಸೂಕ್ತ ಅಧಿಕಾರ ವ್ಯಾಪ್ತಿ ಇರುವ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಇಲ್ಲವೇ ಹೈಕೋರ್ಟ್‌ ಸಂಪರ್ಕಿಸಬಹುದು ಸುಪ್ರೀಂ ಕೋರ್ಟ್‌ ಆಗ ಹೇಳಿತ್ತು.