Arvind Kejriwal and Rouse Avenue Court facebook
ಸುದ್ದಿಗಳು

ಕೇಜ್ರಿವಾಲ್, ಎಎಪಿ ವಿರುದ್ಧ ಇ ಡಿ ಸಲ್ಲಿಸಿದ್ದ ಆರೋಪಪಟ್ಟಿ ಗಣನೆಗೆ ತೆಗೆದುಕೊಂಡ ದೆಹಲಿ ನ್ಯಾಯಾಲಯ

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಪ್ರಾಸಿಕ್ಯೂಷನ್ ದೂರನ್ನು (ಆರೋಪಪಟ್ಟಿ) ದೆಹಲಿ ನ್ಯಾಯಾಲಯ ಮಂಗಳವಾರ ಸಂಜ್ಞೇಯ (ಗಣನೆಗೆ) ತೆಗೆದುಕೊಂಡಿದೆ.

ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಜುಲೈ 12 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಪ್ರೊಡಕ್ಷನ್‌ ವಾರಂಟ್‌ ಹೊರಡಿಸಿದ್ದಾರೆ.

ಪ್ರಕರಣದಲ್ಲಿ ಎಎಪಿ ಮತ್ತು ಕೇಜ್ರಿವಾಲ್ ಅವರನ್ನು ಆರೋಪಿಗಳೆಂದು ಹೆಸರಿಸಿ ಮೇ 17 ರಂದು ಇ ಡಿ ಎಂಟನೇ ಆರೋಪಪಟ್ಟಿ ಸಲ್ಲಿಸಿತ್ತು.

ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಇ ಡಿ ಬಂಧಿಸಿತ್ತು. ಅವರಿಗೆ ವಿಚಾರಣಾ ನ್ಯಾಯಾಲಯದಿಂದ ಜಾಮೀನು ನೀಡಲಾಗಿತ್ತಾದರೂ ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಅದಾದ ಕೆಲವೇ ದಿನಗಳಲ್ಲಿ, ಅವರನ್ನು  ಸಿಬಿಐ ಬಂಧಿಸಿತ್ತು. ಇ ಡಿ ಮತ್ತು ಸಿಬಿಐ ಹೂಡಿದ್ದ ಎರಡೂ ಪ್ರಕರಣಗಳಲ್ಲಿಯೂ ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣದ ಅಕ್ರಮಕ್ಕೆ ಸಂಬಂಧಿಸಿದಂತೆ 2022ರ ಜುಲೈ 20ರಂದು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ ಕೆ ಸೆಕ್ಸೇನಾ ನೀಡಿದ ದೂರು ಆಧರಿಸಿ ಸಿಬಿಐ 2022ರ ಆಗಸ್ಟ್‌ 17ರಂದು ಪ್ರಕರಣ ದಾಖಲಿಸಿಲಾಗಿತ್ತು. ಇದನ್ನು ಆಧರಿಸಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಪ್ರಕರಣ ದಾಖಲಿಸಿದೆ.