Medha Patkar and Delhi LG VK SaxenaX 
ಸುದ್ದಿಗಳು

ಮಾನನಷ್ಟ ಮೊಕದ್ದಮೆ: ದೆಹಲಿ ಲೆ. ಗವರ್ನರ್‌ ಹೂಡಿದ್ದ ಪ್ರಕರಣದಲ್ಲಿ ಹೋರಾಟಗಾರ್ತಿ ಮೇಧಾ ಪಾಟ್ಕರ್ ದೋಷಿ ಎಂದ ನ್ಯಾಯಾಲಯ

ನರ್ಮದಾ ಬಚಾವೋ ಆಂದೋಲನಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮೇಧಾ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ದೆಹಲಿಯ ಮಾಜಿ ಲೆಫ್ಟಿನೆಂಟ್‌ ಗವರ್ನರ್‌ ವಿನಯ್ ಕುಮಾರ್‌ ಸಕ್ಸೇನಾ ಮೊಕದ್ದಮೆ ಹೂಡಿದ್ದರು.

Bar & Bench

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು 2001ರಲ್ಲಿ ದಾಖಲಿಸಿದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ದೋಷಿ ಎಂದು ದೆಹಲಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

ನರ್ಮದಾ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿ ಮೇಧಾ ಅವರು ಸಂಘಟಿಸಿದ್ದ ನರ್ಮದಾ ಬಚಾವೋ ಆಂದೋಲನದ ವಿರುದ್ಧ ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್ ಲಿಬರ್ಟೀಸ್ ಸಂಘಟನೆಯ ಅಧ್ಯಕ್ಷರಾಗಿದ್ದ ಸಕ್ಸೇನಾ ಅವರು 2000ರಲ್ಲಿ ಜಾಹೀರಾತು ಪ್ರಕಟಿಸಿದ್ದರು.

ಈ ಹಿನ್ನೆಲೆಯಲ್ಲಿ ಮೇಧಾ ಅವರು ಸಕ್ಸೇನಾ ಅವರ ವಿರುದ್ಧ ಪತ್ರಿಕಾ ಪ್ರಕಟಣೆ ನೀಡಿದ್ದರು. ಇದರಲ್ಲಿ ಮಾಡಲಾದ ಆರೊಪಗಳನ್ನು ಆಧರಿಸಿ ಸಕ್ಸೇನಾ 2001ರಲ್ಲಿ ಅಹಮದಾಬಾದ್‌ನ ನ್ಯಾಯಾಲಯದಲ್ಲಿ ಮೇಧಾ ಅವರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಪ್ರಕರಣವನ್ನು 2003ರಲ್ಲಿ ದೆಹಲಿಗೆ ವರ್ಗಾಯಿಸಲಾಗಿತ್ತು.

ಇಂದು ನೀಡಿದ ತೀರ್ಪಿನಲ್ಲಿ, ಸಾಕೇತ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಅವರು ನರ್ಮದಾ ಬಚಾವೋ ಆಂದೋಲನದ ಸಂಸ್ಥಾಪಕ ಸದಸ್ಯರಾದ ಮೇಧಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ಸಕ್ಸೇನಾ ಅವರನ್ನು "ಹೇಡಿಯೇ ಹೊರತು ದೇಶಭಕ್ತ ಅಲ್ಲ" ಎಂದು ಕರೆದಿರುವುದನ್ನು ಉಲ್ಲೇಖಿಸಿದರು.

ಬಿಲ್‌ಗೇಟ್ಸ್‌ ಮತ್ತು ವುಲ್ಫೆನ್‌ಸೋನ್‌ ಅವರೆದುರು ಗುಜರಾತ್‌ ಜನರು ಮತ್ತು ಅವರ ಸಂಪನ್ಮೂಲಗಳನ್ನು ಸಕ್ಸೇನಾ ಅಡವಿಟ್ಟಿದ್ದಾರೆ. ಅವರು ಗುಜರಾತ್‌ ಸರ್ಕಾರದ ಏಜೆಂಟ್‌ ಎಂಬುದಾಗಿ ಮೇಧಾ ಆರೋಪಿಸಿದ್ದಾರೆ. ಆರೋಪಿ ಸ್ಥಾನದಲ್ಲಿರುವ ಆಕೆ ಉದ್ದೇಶಪೂರ್ವಕವಾಗಿ ಮತ್ತು ಲೆಕ್ಕಚಾರದಿಂದ ತನ್ನ ಪತ್ರಿಕಾ ಟಿಪ್ಪಣಿಯ ಮೂಲಕ ದೂರುದಾರರನ್ನು ಅವಹೇಳನ ಮಾಡುವ ಸ್ಪಷ್ಟ ಉದ್ದೇಶ ಹೊಂದಿದ್ದರು ಎಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ನುಡಿದಿದೆ.

ಸಕ್ಸೇನಾ ಅವರು "ಹವಾಲಾ ವಹಿವಾಟುಗಳಿಂದ ನೋವು ಅನುಭವಿಸಿದ್ದಾರೆ" ಎಂದು "ಸ್ಪಷ್ಟವಾಗಿ" ಹೇಳುವ ಮೂಲಕ ಮೇಧಾ ಅವರು ಸಕ್ಸೇನಾ ಅವರನ್ನು ಕಾನೂನುಬಾಹಿರ ಮತ್ತು ಅನೈತಿಕ ಹಣಕಾಸು ವ್ಯವಹಾರಗಳೊಂದಿಗೆ ತಳಕು ಹಾಕುವ ಗುರಿ ಹೊಂದಿದ್ದರು. ಇದು ಅವರ ಖ್ಯಾತಿ ಮತ್ತು ಸ್ಥಾನಕ್ಕೆ ಗಮನಾರ್ಹ ಹಾನಿ ಉಂಟುಮಾಡಿದೆ ಎಂದು ತೀರ್ಪು ವಿವರಿಸಿದೆ.

ತಮ್ಮ ಆಪಾದನೆಗಳ ಕುರಿತು ವಸ್ತುನಿಷ್ಠ ಪುರಾವೆಗಳನ್ನು ನೀಡದೆ ಸಕ್ಸೇನಾ ಅವರ ಆರ್ಥಿಕ ಸಮಗ್ರತೆಯನ್ನು ಹಾಳುಮಾಡುವ ಸ್ಪಷ್ಟ ಯತ್ನ ನಡೆದಿದ್ದು ಅಕ್ರಮ ನಡೆದಿದೆ ಎಂಬುದಾಗಿ ಸಾರ್ವಜನಿಕ ಅಭಿಪ್ರಾಯ ಹುಟ್ಟುಹಾಕುತ್ತದೆ ಎಂದು ಅದು ತಿಳಿಸಿದೆ.

ಇದಲ್ಲದೆ ದೂರುದಾರರನ್ನು ಹೇಡಿ ಮತ್ತು ದೇಶಭಕ್ತ ಅಲ್ಲ ಎಂದು ಹಣೆಪಟ್ಟಿ ಹಚ್ಚುವ ಮೇಧಾ ಅವರ ನಿರ್ಧಾರ ಸಕ್ಸೇನಾ ಅವರ ವ್ಯಕ್ತಿತ್ವ ಮತ್ತು ಅವರಿಗೆ ಇರುವ ರಾಷ್ಟ್ರನಿಷ್ಠೆಯ ಮೇಲಿನ ನೇರ ದಾಳಿಯಾಗಿದೆ. ಅಂತಹ ಆರೋಪಗಳು ದೇಶಭಕ್ತಿಗೆ ಹೆಚ್ಚು ಮೌಲ್ಯ ಇರುವ ಸಾರ್ವಜನಿಕ ಕ್ಷೇತ್ರದಲ್ಲಿ ವಿಶೇಷ ಗಂಭೀರ ಸ್ವರೂಪದ್ದಾಗಿವೆ. ಯಾರೊಬ್ಬರ ಧೈರ್ಯ ಮತ್ತು ರಾಷ್ಟ್ರೀಯ ನಿಷ್ಠೆಯನ್ನು ಪ್ರಶ್ನಿಸುವುದು ಅವರ ಸಾರ್ವಜನಿಕ ವ್ಯಕ್ತಿತ್ವ ಮತ್ತು ಸಾಮಾಜಿಕ ಸ್ಥಾನಮಾನಕ್ಕೆ ಸರಿಪಡಿಸಲಾಗದಷ್ಟು ನಷ್ಟ ಉಂಟು ಮಾಡುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

ಆದ್ದರಿಂದ ಮೇಧಾ ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ನುಡಿದಿರುವ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಕುರಿತಂತೆ ಮೇ 30ರಂದು ಕಕ್ಷಿದಾರರ ವಾದ ಆಲಿಸಲಿದೆ.

ಸಕ್ಸೇನಾ ಪರ ವಕೀಲರಾದ ಗಜಿಂದರ್ ಕುಮಾರ್, ಕಿರಣ್ ಜೈ, ಚಂದ್ರಶೇಖರ್, ದೃಷ್ಟಿ ಮತ್ತು ಸೋಮ್ಯಾ ವಾದ ಮಂಡಿಸಿದ್ದರು. ಮೇಧಾ ಅವರನ್ನು ವಕೀಲೆ ಶ್ರೀದೇವಿ ಪನ್ನಿಕರ್ ಪ್ರತಿನಿಧಿಸಿದ್ದರು.