Arvind Kejriwal 
ಸುದ್ದಿಗಳು

ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

Bar & Bench

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 7 ದಿನಗಳ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.

ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಆದೇಶ ಪ್ರಕಟಿಸಿದರು.

ಕೇಜ್ರಿವಾಲ್ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಕೆಲವು ನಿರ್ದೇಶನ ನೀಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಆದೇಶ ಪ್ರಕಟಿಸಿದ ನಂತರ, ಕೇಜ್ರಿವಾಲ್ ಪರ ವಕೀಲ ವಿವೇಕ್ ಜೈನ್ ಅವರು ಸಿಎಂ ಅವರ ಆರೋಗ್ಯದ ಬಗ್ಗೆ ಕಳವಳ ಇದೆ  ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಜೂನ್ 2 ರಂದು, ಅವರು ಶರಣಾದಾಗ, ಅವರ ತೂಕ ಅಳೆಯಲು ತಿಹಾರ್ ಜೈಲಿನಲ್ಲಿ ಮೂರು ಬೇರೆ ಬೇರೆ ತೂಕದ ಯಂತ್ರಗಳನ್ನು ಬಳಸಲಾಯಿತು. ಮೂರರಲ್ಲೂ ಬೇರೆ ಬೇರೆ ಮಾಹಿತಿ ದೊರೆಯಿತು ಎಂದು ಅವರು ವಾದಿಸಿದರು.

ಆದರೆ ನ್ಯಾಯಾಲಯ, ಕಳವಳಗಳಿದ್ದರೆ ಕೇಜ್ರಿವಾಲ್‌ ಅರ್ಜಿ ಸಲ್ಲಿಸಬಹುದು. ಅದನ್ನು ಪರಿಗಣಿಸಲಾಗುವುದು ಎಂದಿತು.

ಕೆಲವು ಮದ್ಯ ಮಾರಾಟಗಾರರಿಗೆ ಅನುಕೂಲವಾಗುವಂತೆ 2021-22ರ ದೆಹಲಿ ಅಬಕಾರಿ ನೀತಿಯಲ್ಲಿ ಉದ್ದೇಶಪೂರ್ವಕ ಸಡಿಲಿಕೆ ಮಾಡಿದ ಸಂಚಿನ ಭಾಗವಾಗಿದ್ದ ಆರೋಪದ ಮೇಲೆ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.

ಕೇಜ್ರಿವಾಲ್‌ ಜಾಮೀನು ಕೋರಿರುವ ಸಾಮಾನ್ಯ ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು ಜೂನ್ 7ರಂದು ಆಲಿಸಲಿದೆ.