ಕೆ ಕವಿತಾ ಮತ್ತು ಇ ಡಿ
ಕೆ ಕವಿತಾ ಮತ್ತು ಇ ಡಿ ಕೆ ಕವಿತಾ (ಫೇಸ್‌ಬುಕ್‌)
ಸುದ್ದಿಗಳು

ಅಬಕಾರಿ ನೀತಿ ಪ್ರಕರಣ: ಬಿಆರ್‌ಎಸ್‌ ನಾಯಕಿ ಕವಿತಾ ಇ ಡಿ ಕಸ್ಟಡಿ ಅವಧಿ ಮಾ.26ರವರೆಗೆ ವಿಸ್ತರಿಸಿದ ದೆಹಲಿ ನ್ಯಾಯಾಲಯ

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 15ರಂದು ಬಂಧಿತರಾಗಿದ್ದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ನಾಯಕಿ ಕೆ ಕವಿತಾ ಅವರನ್ನು ಇನ್ನೂ ಮೂರು ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ ಡಿ) ವಶಕ್ಕೆ ನೀಡಿ ದೆಹಲಿ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.

ಜಾರಿ ನಿರ್ದೇಶನಾಲಯದ ಪರವಾಗಿ ವಿಶೇಷ ವಕೀಲ ಜೊಹೆಬ್ ಹೊಸೇನ್ ಮತ್ತು ಕವಿತಾ ಪರವಾಗಿ ವಕೀಲ ನಿತೇಶ್ ರಾಣಾ ಅವರ ವಾದವನ್ನು ಆಲಿಸಿದ ನಂತರ ರೌಸ್‌ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಈ ಆದೇಶ ನೀಡಿದರು.

ಕವಿತಾ ಅವರನ್ನು ಇನ್ನೂ ಐದು ದಿನಗಳ ಕಾಲ ವಶಕ್ಕೆ ನೀಡುವಂತೆ ಇ ಡಿ ಇಂದು ಕೋರಿತಾದರೂ ನ್ಯಾಯಾಲಯ ಮೂರು ದಿನಗಳ ವಶಕ್ಕೆ ಮಾತ್ರ ಅನುಮತಿಸಿತು. ಅಂದರೆ ಈ ಅವಧಿ ಮಾರ್ಚ್ 26, ಮಂಗಳವಾರ ಕೊನೆಗೊಳ್ಳಲಿದೆ.

ಈವರೆಗಿನ ತನಿಖೆಯ ಪ್ರಗತಿಯ ಬಗ್ಗೆ ಮಾತನಾಡಿದ ವಿಶೇಷ ವಕೀಲ ಹೊಸೇನ್‌, ಕವಿತಾ ರೂ. 100 ಕೋಟಿ ಕಿಕ್‌ಬ್ಯಾಕ್‌ ಪಡೆಯಲು ಸಂಚು ರೂಪಿಸಿದ್ದರು. ಆಕೆಯ ಮೊಬೈಲ್‌ ಫೋನ್‌ ವಿವರಗಳನ್ನು ಪರಿಶೀಲಿಸಲಾಗಿದೆ. ಮೊಬೈಲ್‌ ಮಾಹಿತಿಯನ್ನು ಅಳಿಸಲಾಗಿತ್ತು ಎನ್ನಲು ಪುರಾವೆಗಳಿವೆ ಎಂದರು.

ಅಪರಾಧದಲ್ಲಿ ಕವಿತಾ ಅವರ ಸೋದರಳಿಯ ಕೂಡ ಭಾಗಿಯಾಗಿರುವುದರಿಂದ ಇ ಡಿ ಆತನಿಗೆ ಹಲವು ಬಾರಿ ಸಮನ್ಸ್‌ ನೀಡಿದೆ. ಅವರು ಸಹಕರಿಸದ ಕಾರಣ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ತಿಳಿಸಿದರು.

ಈ ಮಧ್ಯೆ ಕವಿತಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಆಕೆಯ ಪರ ವಕೀಲರಾದ ರಾಣಾ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಆದರೆ ಈ ಬೆಳವಣಿಗೆಗೆ ಆಕ್ಷೇಪ ವ್ಯಕ್ತಪಡಿಸಿದ ಇ ಡಿ ವಕೀಲ ಹೊಸೇನ್‌, ಪ್ರಕರಣದ ಪ್ರಸ್ತುತ ಹಂತದಲ್ಲಿ ಜಾಮೀನು ಅರ್ಜಿ ಪರಿಗಣಿಸಬಾರದು ಎಂದು ಕೋರಿದರು.

ಮಾರ್ಚ್ 15ರ ಸಂಜೆ ಹೈದರಾಬಾದ್‌ನ ಕವಿತಾ ಅವರ ನಿವಾಸದಲ್ಲಿ ಶೋಧ ನಡೆಸಿದ್ದ ಇ ಡಿ ತಂಡ ಅದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧಿಸಿತ್ತು. ರೌಸ್‌ ಅವೆನ್ಯೂ ನ್ಯಾಯಾಲಯ ಮಾರ್ಚ್ 16 ರಂದು ಅವರನ್ನು ಇ ಡಿ ವಶಕ್ಕೆ ನೀಡಿತ್ತು. ನಿನ್ನೆ, ಸುಪ್ರೀಂ ಕೋರ್ಟ್ ಅವರಿಗೆ ತುರ್ತು ಪರಿಹಾರ ಒದಗಿಸಲು ನಿರಾಕರಿಸಿತ್ತು. ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಸೂಚಿಸಿತ್ತು.

ವಿಶೇಷವೆಂದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರೌಸ್‌ ಅವೆನ್ಯೂ ನ್ಯಾಯಾಲಯ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಆರು ದಿನಗಳ ಕಾಲ ಇ ಡಿ ವಶಕ್ಕೆ ಒಪ್ಪಿಸಿತ್ತು. ಇದೇ ಪ್ರಕರಣದಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೆರೆವಾಸ ಅನುಭವಿಸುತ್ತಿದ್ದಾರೆ.