Sushil Kumar 
ಸುದ್ದಿಗಳು

ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್‌ ಕುಮಾರ್‌ ನ್ಯಾಯಾಂಗ ಬಂಧನ ಅವಧಿ ಜೂನ್‌ 25ರವರೆಗೆ ವಿಸ್ತರಿಸಿದ ದೆಹಲಿ ನ್ಯಾಯಾಲಯ

ದೆಹಲಿಯ ಛತರ್ಸಾಲ್‌ ಕ್ರೀಡಾಂಗಣಕ್ಕೆ ಕೊಲೆಯಾದ ಸೋನು ಅವರನ್ನು ಬಂದೂಕಿನಿಂದ ಬೆದರಿಸಿ ಕರೆದೊಯ್ದ ಆರೋಪಿಗಳಾದ ಸುಶೀಲ್‌ ಕುಮಾರ್‌ ಮತ್ತಿತರರು ಮನಸೋಇಚ್ಛೆ ಥಳಿಸಿದ್ದಾರೆ ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ವಾದಿಸಿದ್ದಾರೆ.

Bar & Bench

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದೆಹಲಿ ಪೊಲೀಸರಿಂದ ತನಿಖೆಗೆ ಒಳಪಟ್ಟಿರುವ ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಸುಶೀಲ್‌ ಕುಮಾರ್‌ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಜೂನ್‌ 25ರ ವರೆಗೆ ದೆಹಲಿ ನ್ಯಾಯಾಲಯ ಶುಕ್ರವಾರ ವಿಸ್ತರಿಸಿದೆ. ಈ ಹಿಂದಿನ ಒಂಭತ್ತು ದಿನಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯವಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಕೊಲೆಯಾದ ಸೋನು ಅವರನ್ನು ಬಂದೂಕಿನಿಂದ ಬೆದರಿಸಿ ದೆಹಲಿಯ ಛತರ್ಸಾಲ್‌ ಕ್ರೀಡಾಂಗಣಕ್ಕೆ ಕರೆದೊಯ್ದ ಆರೋಪಿಗಳಾದ ಸುಶೀಲ್‌ ಕುಮಾರ್‌ ಮತ್ತಿತರರು ಅವರನ್ನು ಮನಸೋಇಚ್ಛೆ ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ವಾದಿಸಿದರು.

ಕಳೆದ ತಿಂಗಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್‌ ಕುಮಾರ್‌ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ದೆಹಲಿ ನ್ಯಾಯಾಲಯ ನಿರಾಕರಿಸಿತ್ತು.

ಹತ್ತು ದಿನ ಪೊಲೀಸರ ವಶದಲ್ಲಿದ್ದ ಸುಶೀಲ್‌ ಕುಮಾರ್‌ ಅವರನ್ನು ಜೂನ್‌ 2ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜೈಲಿನಲ್ಲಿ ವಿಶೇಷ ಆಹಾರ ಹಾಗೂ ಪ್ರೊಟೀನ್‌ ಆರೋಗ್ಯ ಪೂರಣ, ಓಮೆಗಾ-3 ಮಾತ್ರೆಗಳು, ಜಾಯಿಂಟ್‌ಮೆಂಟ್‌ ಇತ್ಯಾದಿ ನೀಡುವಂತೆ ಕೋರಿ ಸುಶಿಲ್‌ ಕುಮಾರ್‌ ಸಲ್ಲಿಸಿದ್ದ ಮನವಿಯನ್ನು ಸಹ ಈಚೆಗೆ ದೆಹಲಿ ನ್ಯಾಯಾಲಯ ತಿರಸ್ಕರಿಸಿತ್ತು.

ಹೆಚ್ಚುವರಿ ಸರ್ಕಾರಿ ಅಭಿಯೋಜಕ ಅತುಲ್‌ ಶ್ರೀವಾಸ್ತವ ಅವರು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರೆ, ವಕೀಲ ಪ್ರದೀಪ್‌ ರಾಣಾ ಅವರು ಸುಶೀಲ್‌ ಕುಮಾರ್‌ ಪರ ವಾದಿಸಿದರು. ದೂರುದಾರರನ್ನು ವಕೀಲ ನಿತಿನ್‌ ವಶಿಷ್ಠ್‌ ಪ್ರತಿನಿಧಿಸಿದರು.