ಕಳೆದ ವರ್ಷ ರಾಷ್ಟ್ರ ರಾಜಧಾನಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಕುಸ್ತಿಪಟುವೊಬ್ಬರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್‌ನಲ್ಲಿ ಕಂಚು, ಬೆಳ್ಳಿ ಪದಕ ಗಳಿಸಿ ದೇಶದ ಗಮನ ಸೆಳೆದಿದ್ದ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ದೆಹಲಿಯ ನ್ಯಾಯಾಲಯವೊಂದು ಕೊಲೆಯ ಆರೋಪ ನಿಗದಿಪಡಿಸಿದೆ [ದೆಹಲಿ ಸರ್ಕಾರ ಮತ್ತು ಸುಶೀಲ್ ಕುಮಾರ್ ಮತ್ತಿತರರ ನಡುವಣ ಪ್ರಕರಣ].
ಹತ್ಯೆ ನಡೆದ ದಿನ ಕೊಲೆಗೀಡಾದ ಸಾಗರ್ ಧನ್‌ಖಡ್‌ಗಾಗಿ ಸುಶೀಲ್ ಹುಡುಕಾಟ ನಡೆಸಿದ್ದ ಮತ್ತು ಆತನನ್ನು ಕೊಲ್ಲುವುದಾಗಿ ಘೋಷಿಸಿದ್ದ ಎಂಬ ಸಾಕ್ಷಿಗಳ ಹೇಳಿಕೆ ಆಧರಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶಿವಾಜಿ ಆನಂದ್ ಅವರು ಸುಶೀಲ್ ಕುಮಾರ್ ವಿರುದ್ಧ ಆರೋಪ ನಿಗದಿಪಡಿಸಿದ್ದಾರೆ.
ಅಲ್ಲದೆ ಭಾರೀ ವಸ್ತುವಿನಿಂದ ತಲೆಗೆ ಜಜ್ಜಿದ ಪರಿಣಾಮ ಮೆದುಳಿಗೆ ಹಾನಿಯಾಗಿ ಸಾಗರ್ ಮೃತಪಟ್ಟಿರುವುದನ್ನು ಮರಣೋತ್ತರ ಪರೀಕ್ಷೆ ಉಲ್ಲೇಖಿಸಿದೆ ಎಂಬುದನ್ನು ನ್ಯಾಯಾಲಯ ಇದೇ ವೇಳೆ ಗಮನಿಸಿತು. "ಹತ್ಯೆಗೀಡಾದ ಸಾಗರ್ ಅವರನ್ನು 30-40 ನಿಮಿಷಗಳ ಕಾಲ ಥಳಿಸಲಾಗಿದೆ ಎಂದು ಸಂತ್ರಸ್ತರ ಹೇಳಿಕೆಗಳು ತಿಳಿಸಿವೆ. ಪ್ರಕರಣದ ವಾದವಿವಾದದ ವೇಳೆ ಸಾಗರ್ ಧನ್‌ಖಡ್ ರಕ್ತದ ಮಡುವಿನಲ್ಲಿ ಬಿದ್ದಿರುವ ವಿಡಿಯೋ ತುಣುಕನ್ನೂ ಸಹ ತೋರಿಸಲಾಗಿದ್ದು ಇದರಲ್ಲಿ ಅವರ ದೇಹದ ಕಾಲು, ಮತ್ತಿತರ ಭಾಗಗಳಿಂದ ವಿಪರೀತ ರಕ್ತ ಸುರಿಯುತ್ತಿರುವುದು ಕಂಡುಬಂದಿದೆ," ಎಂದು ಆರೋಪ ನಿಗದಿ ಆದೇಶದ ವೇಳೆ ನ್ಯಾಯಾಲಯ ಹೇಳಿತು.
ಸರ್ಕಾರಿ ವಕೀಲರು ಹಾಗೂ ಸುಶೀಲ್ ಮತ್ತಿತರ ಆರೋಪಿಗಳ ಪರ ವಕೀಲರ ವಾದಗಳನ್ನು ಆಲಿಸಿದ ನ್ಯಾಯಾಲಯ ಅಂತಿಮವಾಗಿ ಸಾಕ್ಷಿಗಳ ಹೇಳಿಕೆ, ಆರೋಪಿಗಳ ಸ್ಥಳ, ವೈದ್ಯಕೀಯ ಪುರಾವೆ ಹಾಗೂ ಆರೋಪಪಟ್ಟಿಯಲ್ಲಿರುವ ಇತರ ಸಾಕ್ಷಿಗಳನ್ನು ಅವಲಂಬಿಸಿ ಸಾಗರ್ ಧನ್‌ಖಡ್ ಕೊಲೆ, ಐಪಿಸಿ ಸೆಕ್ಷನ್ 302ರಡಿಯ ಬಲವಾದ ಪ್ರಕರಣ ಎಂದು ತೀರ್ಮಾನಿಸಿತು.