Brij Bhushan Sharan Singh and Rouse avenue court 
ಸುದ್ದಿಗಳು

ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ನಿಗದಿಪಡಿಸಿದ ದೆಹಲಿ ನ್ಯಾಯಾಲಯ

Bar & Bench

ಐವರು ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಘನತೆಗೆ ಧಕ್ಕೆ ತಂದ ಆರೋಪವನ್ನು ಶುಕ್ರವಾರ ದೆಹಲಿ ನ್ಯಾಯಾಲಯ ನಿಗದಿಪಡಿಸಿದೆ.

ರೌಸ್‌ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪ್ರಿಯಾಂಕಾ ರಜಪೂತ್‌ ಈ ಸಂಬಂಧ ಆದೇಶ ಮಾಡಿದ್ದಾರೆ.

“1ರಿಂದ 5ರವರೆಗಿನ ಸಂತ್ರಸ್ತೆಯರಿಗೆ ಸಂಬಂಧಿಸಿದಂತೆ ಮೊದಲನೇ ಆರೋಪಿ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354 (ಮಹಿಳೆಯ ಘನತೆಗೆ ಧಕ್ಕೆ), 354ಎ (ಲೈಂಗಿಕ ಕಿರುಕುಳ) ಅಡಿ ಆರೋಪಕ್ಕೆ ಸಂಬಂಧಿಸಿದಂತೆ ಆರೋಪ ನಿಗದಿ ಮಾಡಲು ದಾಖಲೆಯಲ್ಲಿ ಸಾಕಷ್ಟು ಅಂಶಗಳಿವೆ” ಎಂದು ನ್ಯಾಯಾಲಯ ಹೇಳಿದೆ.

ಇಬ್ಬರು ಕುಸ್ತಿಪಟುಗಳಿಗೆ ಕ್ರಿಮಿನಲ್‌ ಬೆದರಿಕೆ (ಐಪಿಸಿ ಸೆಕ್ಷನ್‌ 506(1) ಹಾಕಿರುವುದಕ್ಕೆ ಸಂಬಂಧಿಸಿದಂತೆ ಆರೋಪ ನಿಗದಿ ಮಾಡಲು ಸಾಕಷ್ಟು ದಾಖಲೆಗಳು ಇವೆ ಎಂದು ಮ್ಯಾಜಿಸ್ಟ್ರೇಟ್‌ ಪ್ರಿಯಾಂಕಾ ಹೇಳಿದ್ದಾರೆ.

“ಆರನೇ ಸಂತ್ರಸ್ತರಿಗೆ ಸಂಬಂಧಿಸಿದಂತೆ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ. ಮೊದಲನೇ ಸಂತ್ರಸ್ತೆಗೆ ಕ್ರಿಮಿನಲ್‌ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಹ ಆರೋಪಿಯಾದ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್‌ ತೋಮರ್‌ ವಿರುದ್ಧವೂ ಆರೋಪ ನಿಗದಿ ಮಾಡಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಆರು ಮಹಿಳಾ ಕುಸ್ತಿಪಟುಗಳು ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಮಹಿಳಾ ಕ್ರೀಡಾಪಟುಗಳ ದೂರು ಆಧರಿಸಿ ಪೊಲೀಸರು ಸಂಸದ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

2023ರ ಜೂನ್‌ 15ರಂದು ಸಿಂಗ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354 (ಮಹಿಳೆ ಘನತೆಗೆ ಧಕ್ಕೆ), 354ಎ (ಲೈಂಗಿಕ ಅವಾಚ್ಯ ಶಬ್ದ ಬಳಕೆ), 354ಡಿ (ಹಿಂಬಾಲಿಸುವುದು) ಮತ್ತು 506(1) (ಕ್ರಿಮಿನಲ್‌ ಬೆದರಿಕೆ) ಅಡಿ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಇದಕ್ಕೂ ಮುನ್ನ, ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರಿ ಮಹಿಳಾ ಕುಸ್ತಿಪಟುಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಈ ಮಧ್ಯೆ, ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ಸರಿಯಾದ ದಾರಿಯಲ್ಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಅಪ್ರಾಪ್ತ ಕುಸ್ತಿಪಟುವೂ ಸಿಂಗ್‌ ವಿರುದ್ಧ ಆರೋಪ ಮಾಡಿ, ಆನಂತರ ಅದನ್ನು ಹಿಂಪಡೆದಿದ್ದರು. ಈ ಸಂಬಂಧ ದೆಹಲಿ ಪೊಲೀಸರು ಪೋಕ್ಸೊ ಕಾಯಿದೆ ಅಡಿ ಅಪರಾಧಕ್ಕೆ ರದ್ದತಿ ವರದಿ ಸಲ್ಲಿಸಿದ್ದರು.