ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.
ಜಾರಿ ನಿರ್ದೇಶನಾಲಯ ಮತ್ತು ಕೇಜ್ರಿವಾಲ್ ಪರ ವಕೀಲದ ವಾದವನ್ನು ಎರಡು ದಿನ ಆಲಿಸಿದ ರಜಾಕಾಲೀನ ನ್ಯಾಯಾಧೀಶರಾದ ನಿಯಾಯ್ ಬಿಂದು ಆದೇಶ ಮಾಡಿದ್ದಾರೆ. ಬೆಳಿಗ್ಗೆ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದರು.
ಸಂಜೆ ಆದೇಶ ಪ್ರಕಟಿಸುತ್ತಿದ್ದಂತೆ ಜಾರಿ ನಿರ್ದೇಶನಾಲಯವು ಜಾಮೀನು ಬಾಂಡ್‌ಗೆ ಸಹಿ ಹಾಕುವುದನ್ನು ಮೇಲ್ಮನವಿ ಸಲ್ಲಿಕೆಗೆ ಅನುಕೂಲವಾಗುವಂತೆ ಎರಡು ದಿನ ಮುಂದೂಡಬೇಕು ಎಂದು ಕೋರಿತು.
ಇದಕ್ಕೆ ಒಪ್ಪದ ನ್ಯಾಯಾಧೀಶರು, ತೀರ್ಪಿಗೆ ತಡೆ ನೀಡಲು ನಿರಾಕರಿಸಿದರು. ನಾಳೆ ಕರ್ತವ್ಯದಲ್ಲಿರುವ ನ್ಯಾಯಾಧೀಶರ ಮುಂದೆ ಜಾಮೀನು ಬಾಂಡ್ ಸಲ್ಲಿಸಬೇಕು ಎಂದು ನ್ಯಾಯಾಧೀಶರಾದ ಬಿಂದು ಆದೇಶಿಸಿದರು.
ಕೆಲವು ಮದ್ಯ ಮಾರಾಟಗಾರರಿಗೆ ನೆರವಾಗುವ ಉದ್ದೇಶದಿಂದ ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿಯಲ್ಲಿ ಕೇಜ್ರಿವಾಲ್ ಪಿತೂರಿ ಅಡಗಿದೆ ಎಂದು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯವು ಅವರನ್ನು ಬಂಧಿಸಿತ್ತು.