Lalu Yadav, Rabri Devi and Tejashwi Yadav Facebook
ಸುದ್ದಿಗಳು

ರೈಲ್ವೆ ನೇಮಕಾತಿ ಹಗರಣ: ಲಾಲು, ರಾಬ್ಡಿ ದೇವಿ, ತೇಜಸ್ವಿ ಯಾದವ್‌ಗೆ ದೆಹಲಿ ನ್ಯಾಯಾಲಯ ಜಾಮೀನು

ಲಾಲು ಪ್ರಸಾದ್ ಅವರು 2004ರಿಂದ 2009ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ತಮ್ಮ ಕುಟುಂಬದ ಹೆಸರಿಗೆ ಜಮೀನು ವರ್ಗಾವಣೆ ಮಾಡಿಕೊಟ್ಟರೆ ರೈಲ್ವೆಯಲ್ಲಿ ಉದ್ಯೋಗ ನೀಡಲಾಗುವುದು ಎಂದು ಆಮಿಷ ಒಡ್ಡಿದ್ದಾಗಿ ಆರೋಪಿಸಲಾಗಿತ್ತು.

Bar & Bench

ಭಾರತೀಯ ರೈಲ್ವೆಯಲ್ಲಿ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಮತ್ತು ಇವರ ಪುತ್ರ ಹಾಗೂ ಬಿಹಾರದ ಹಾಲಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ದೆಹಲಿ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.

ಸಿಬಿಐ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಜುಲೈ 3 ರಂದು ಸಿಬಿಐ ಸಲ್ಲಿಸಿದ ನೂತನ ಆರೋಪಪಟ್ಟಿಯನ್ನು ಪರಿಗಣಿಸಿದ ನ್ಯಾಯಾಲಯ ಸೆಪ್ಟೆಂಬರ್ 22ರಂದು ತೇಜಸ್ವಿ ಯಾದವ್, ಲಾಲು ಯಾದವ್, ರಾಬ್ಡಿ ದೇವಿ ಹಾಗೂ ಇತರ ಹದಿನಾಲ್ಕು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು.

ಲಾಲು ಪ್ರಸಾದ್ ಅವರು 2004 ರಿಂದ 2009 ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ತಮ್ಮ ಕುಟುಂಬದ ಹೆಸರಿಗೆ ಜಮೀನು ವರ್ಗಾವಣೆ ಮಾಡಿಕೊಟ್ಟರೆ ರೈಲ್ವೆಯಲ್ಲಿ ಉದ್ಯೋಗ ನೀಡಲಾಗುವುದು ಎಂದು ಆಮಿಷ ಒಡ್ಡಿದ್ದಾಗಿ ಆರೋಪಿಸಲಾಗಿತ್ತು.

ನೇಮಕಾತಿ ವಿಚಾರದಲ್ಲಿ ಭಾರತೀಯ ರೈಲ್ವೆ ನಿಗದಿಪಡಿಸಿರುವ ಮಾನದಂಡ ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ನೇಮಕಾತಿ ಇರಲಿಲ್ಲ ಎಂದು ಸಿಬಿಐ ಹೇಳಿತ್ತು.