Disha Ravi, Toolkit 
ಸುದ್ದಿಗಳು

ಟೂಲ್‌ಕಿಟ್‌ ಪ್ರಕರಣ: ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ಶನಿವಾರ ಆದೇಶ ಕಾಯ್ದಿರಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಮಂಗಳವಾರ ಜಾಮೀನು ನೀಡಿದ್ದಾರೆ.

Bar & Bench

ದೆಹಲಿ ಪ್ರತಿಭಟನೆ ಟೂಲ್‌ಕಿಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸೆಷನ್ಸ್‌ ನ್ಯಾಯಾಲಯ 22 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಜಾಮೀನು ನೀಡಿದೆ.

ದಿಶಾ ಅವರನ್ನು ಒಂದು ದಿನದ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿತ್ತು. ಗಡುವು ಮುಗಿದ ಹಿನ್ನೆಲೆಯಲ್ಲಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶರ ಮುಂದೆ ದೆಹಲಿ ಪೊಲೀಸರು ದಿಶಾ ಅವರನ್ನು ಹಾಜರುಪಡಿಸಿದ್ದರು. ದಿಶಾರನ್ನು ಇನ್ನೂ ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಬೇಕೆಂದು ಪೊಲೀಸರು ಚೀಫ್‌ ಮೆಟ್ರೋ ಪಾಲಿಟನ್ ನ್ಯಾಯಾಧೀಶ ಪಂಕಜ್‌ ಶರ್ಮಾ ಅವರನ್ನು ಕೋರಿದ್ದರು. ಇತ್ತ ಮತ್ತೊಂದೆಡೆ ದಿಶಾ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿ ಶನಿವಾರ ಆದೇಶ ಕಾಯ್ದಿರಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಮಂಗಳವಾರ ಜಾಮೀನು ನೀಡಿದ್ದಾರೆ. ಜಾಮೀನು ನೀಡಿದ ಹಿನ್ನೆಲೆಯಲ್ಲಿ ದಿಶಾರನ್ನು ಪೊಲೀಸ್‌ ವಶಕ್ಕೆ ಕೋರಿದ್ದ ದೆಹಲಿ ಪೊಲೀಸರ ಮನವಿಯನ್ನು ನ್ಯಾಯಾಧೀಶರು ನಿರಾಕರಿಸಿದರು.

ರೈತರ ಪ್ರತಿಭಟನೆಯ ನಡುವೆ ಹಿಂಸಾಚಾರ ಸೃಷ್ಟಿಸಲು ಯತ್ನಿಸಲಾಗಿದ್ದ ಖಲಿಸ್ತಾನಿ ಪರ ಸಂಘಟನೆಗಳ ಆದೇಶದ ಮೇರೆಗೆ ದಿಶಾ ದೇಶವಿರೋಧಿ ವಿಷಯವುಳ್ಳ ಟೂಲ್‌ಕಿಟ್‌ ಸಂಪಾದಿಸಿದ್ದರು ಎಂದು ಪೊಲೀಸರು ಹೇಳಿದ್ದರು. ದಿಶಾ ಅವರನ್ನು ಫೆಬ್ರುವರಿ 13 ರಂದು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು.

ದಿಶಾ ಪರವಾಗಿ ಹಾಜರಾದ ವಕೀಲ ಸಿಧಾರ್ಥ್ ಅಗರ್ವಾಲ್ ತಮ್ಮ ಕಕ್ಷೀದಾರರಿಗೆ ಖಲಿಸ್ತಾನ್ ಚಳವಳಿಯೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಅವರ ಕಳಕಳಿ ಹವಾಮಾನ ಮತ್ತು ಕೃಷಿಗೆ ಸೀಮಿತವಾಗಿದೆ ಎಂದು ವಿವರಿಸಿ ಜಾಮೀನು ಕೋರಿದ್ದರು. ಪ್ರಕರಣದ ಇತರೆ ಆರೋಪಿಗಳಾದ ನಿಕಿತಾ ಜೇಕಬ್ ಮತ್ತು ಶಂತನು ಮುಲುಕ್ ಅವರಿಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಲಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಷರತ್ತುಗಳಿಗೆ ಒಳಪಡಿಸಿ ತನ್ನ ಬಿಡುಗಡೆಗೆ ನಿರ್ದೇಶನ ನೀಡುವಂತೆ ಅಗರ್ವಾಲ್‌ ನ್ಯಾಯಾಲಯವನ್ನು ಕೋರಿದರು. “ನಾನು ದೆಹಲಿ ತೊರೆಯುವುದಿಲ್ಲ. ಯಾವುದೇ ತನಿಖೆಗೆ ಅಡ್ಡಿಪಡಿಸುವುದಿಲ್ಲ" ಎಂದು ದಿಶಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ದಿಶಾ ದೇಶದ್ರೋಹ ಅಥವಾ ಹಿಂಸೆಗೆ ಪ್ರಚೋದನೆ ನೀಡುವ ಯಾವುದೇ ಕೃತ್ಯದಲ್ಲಿ ಪಾಲ್ಗೊಂಡಿಲ್ಲ ಎಂದು ಅಗರ್‌ವಾಲ್‌ ಬಲವಾಗಿ ವಾದಿಸಿದರು. ಮತ್ತೊಂದೆಡೆ ಸಾಕ್ಷ್ಯಗಳನ್ನು ನಾಶ ಪಡಿಸುವ ಭೀತಿಯಿಂದ ದೆಹಲಿ ಪೊಲೀಸರು ದಿಶಾ ಬಿಡುಗಡೆಗೆ ವಿರೋಧಿಸಿದ್ದರು. ದಿಶಾ ಇತರೆ ಆರೋಪಿಗಳೊಂದಿಗೆ ಸೇರಿ ಖಲಿಸ್ತಾನಿ ಕೆನಡಾ ಸಂಘಟನೆಗಳು, ಪೊಯೆಟಿಕ್‌ ಜಸ್ಟೀಸ್‌ ಪ್ರತಿಷ್ಠಾನ ಹಾಗೂ ಸಿಖ್ಸ್‌ ಫಾರ್‌ ಜಸ್ಟೀಸ್‌ ಸಂಘಟನೆಗಳೊಡನೆ ಒಡಗೂಡಿ ಭಾರತದ ಹೆಸರಿಗೆ ಕಳಂಕ ತರಲು ಯತ್ನಿಸಿದ್ದರು. ದಿಶಾ ಟೂಲ್‌ಕಿಟ್‌‌ ಆನ್ನು ಗ್ರೆಥಾ ಥನ್‌ಬರ್ಗ್‌ ಅವರೊಂದಿಗೆ ಹಂಚಿಕೊಂಡಿದ್ದು ಅದನ್ನು ಅವರು ಟ್ವೀಟ್‌ ಮಾಡಿದ್ದರು ಎಂದು ಪ್ರಾಸಿಕ್ಯೂಷನ್‌ ವಾದಿಸಿತು. ಪೊಲೀಸ್‌ ವಶದಲ್ಲಿದ್ದಾಗ ದಿಶಾ ಅವರು ಜೇಕಬ್‌ ಮತ್ತು ಮುಲುಕ್‌ ಅವರ ಮೇಲೆ ಆಪಾದನೆಗಳನ್ನು ಹೊರಿಸಿದ್ದರು ಹೀಗಾಗಿ ಅವರೊಂದಿಗೆ ದಿಶಾರನ್ನು ಮುಖಾಮುಖಿಯಾಗಿಸಲು ವಶಕ್ಕೆ ಒಪ್ಪಿಸುವುದು ಅಗತ್ಯ ಎಂದಿದ್ದರು.

ಸೋಮವಾರ ದಿಶಾರನ್ನು ಪೊಲೀಸರು ಐದು ದಿನಗಳ ಪೊಲೀಸ್‌ ಕಸ್ಟಡಿಗೆ ಕೋರಿದ್ದರು. ಆದರೆ ಒಂದು ದಿನದ ಮಟ್ಟಿಗೆ ಅವರನ್ನು ಪೊಲೀಸ್‌ ವಶಕ್ಕೆ ಒಪ್ಪಿಸಿ ಚೀಫ್‌ ಮೆಟ್ರೊಪಾಲಿಟನ್‌ ನ್ಯಾಯಾದೀಶರು ಆದೇಶಿಸಿದ್ದರು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು, ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಇರ್ಫಾನ್‌ ಅಹ್ಮದ್‌ ಸರ್ಕಾರದ ಪರವಾಗಿ ವಾದ ಮಂಡಿಸಿದರು.