Shikhar Dhawan and Patiala house Court  Facebook
ಸುದ್ದಿಗಳು

ಪತ್ನಿಯಿಂದ ಮಾನಸಿಕ ಕ್ರೌರ್ಯ: ಶಿಖರ್ ಧವನ್ ವಿಚ್ಛೇದನ ಪಡೆಯಲು ದೆಹಲಿ ನ್ಯಾಯಾಲಯ ಅಸ್ತು

ಧವನ್ ತಮ್ಮ ಪರಿತ್ಯಕ್ತ ಪತ್ನಿ ವಿರುದ್ಧ ಮಾಡಿದ ಬಹುತೇಕ ಆರೋಪಗಳನ್ನು ಒಪ್ಪಿದ ನ್ಯಾಯಾಲಯ ಆಕೆ ಧವನ್ ಅವರಿಗೆ ಮಾನಸಿಕ ಹಿಂಸೆ ನೀಡಿ ಕ್ರೌರ್ಯ ಮೆರೆದಿದ್ದಾರೆ ಎಂದು ನುಡಿದಿದೆ.

Bar & Bench

ಪತ್ನಿಯಿಂದ ಮಾನಸಿಕ ಹಿಂಸೆ ಅನುಭವಿಸಿದ ಕ್ರಿಕೆಟಿಗ ಶಿಖರ್‌ ಧವನ್‌ ತಮ್ಮ ಪರಿತ್ಯಕ್ತ ಪತ್ನಿ ಆಯೆಷಾ ಮುಖರ್ಜಿ ಅವರಿಂದ ವಿಚ್ಛೇದನ ಪಡೆಯಲು ದೆಹಲಿಯ ಕೌಟುಂಬಿಕ ನ್ಯಾಯಾಲಯ ಬುಧವಾರ ಸಮ್ಮತಿಸಿದೆ [ಶಿಖರ್ ಧವನ್ ಮತ್ತು ಆಯೆಷಾ ಧವನ್‌ ನಡುವಣ ಪ್ರಕರಣ].

ಧವನ್‌ ತಮ್ಮ ಪರಿತ್ಯಕ್ತ ಪತ್ನಿ ವಿರುದ್ಧ ವಿಚ್ಛೇದನ ಅರ್ಜಿಯಲ್ಲಿ ಮಾಡಿದ್ದ ಬಹುತೇಕ ಆರೋಪಗಳನ್ನು ಅವರ ಪತ್ನಿಯು ವಿರೋಧಿಸುವುದಾಗಲಿ, ಸಮರ್ಥಿಸುವುದಾಗಲೀ ಮಾಡದೆ ಇದ್ದುದರಿಂದ ನ್ಯಾಯಾಧೀಶ ಹರೀಶ್‌ ಕುಮಾರ್‌ ಅವರು ಈ ಆರೋಪಗಳನ್ನು ಒಪ್ಪಿದರು.

ತನ್ನ ಏಕೈಕ ಪುತ್ರನಿಂದ ವರ್ಷಗಟ್ಟಲೆ ದೂರವಿರುವಂತೆ ಮಾಡುವ ಮೂಲಕ ಧವನ್ ಪತ್ನಿಯು ಅವರಿಗೆ ಮಾನಸಿಕ ಯಾತನೆ ಉಂಟು ಮಾಡಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ದಂಪತಿಯ ಮಗನನ್ನು ತಮ್ಮ ಶಾಶ್ವತ ಸುಪರ್ದಿಗೆ ನೀಡಬೇಕು ಎಂಬ ಧವನ್‌ ಕೋರಿಕೆಯನ್ನು ಇದೇ ವೇಳೆ ನಿರಾಕರಿಸಿದ ನ್ಯಾಯಾಲಯ ಧವನ್‌ ಅವರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ತಮ್ಮ ಮಗನನ್ನು ನಿರ್ದಿಷ್ಟ ಅವಧಿಯಲ್ಲಿ ಭೇಟಿ ಮಾಡಲು ಅಗತ್ಯವಾದ ಭೇಟಿ ಹಕ್ಕುಗಳನ್ನು ಮತ್ತು ವೀಡಿಯೊ ಕರೆ ಮೂಲಕ ಮಗನೊಂದಿಗೆ ಸಂಭಾಷಿಸುವ ಅವಕಾಶವನ್ನು ಕಲ್ಪಿಸಿತು.

ಮಗನಿಗೆ ಶಾಲಾ ರಜೆ ಇದ್ದ ಸಂದರ್ಭದಲ್ಲಿ ಕನಿಷ್ಠ ರಜೆಯ ಅರ್ಧ ಅವಧಿಯ ಸಮಯಕ್ಕಾದರೂ ಆಯೆಷಾ ಆತನನ್ನು ಭಾರತಕ್ಕೆ ಕರೆತರುವುದರ ಜೊತೆಗೆ ಧವನ್‌ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ರಾತ್ರಿ ತಂಗಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಶಿಖರ್‌ ಮತ್ತು ಆಯೇಷಾ 2012ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಜೋರಾವರ್ ಹೆಸರಿನ ಮಗ ಇದ್ದಾನೆ. ಆಯೇಷಾಗೆ ಇದು ಎರಡನೇ ಮದುವೆಯಾಗಿದ್ದು, ಆಕೆ ಶಿಖರ್ ಅವರಿಗಿಂತಲೂ 10 ವರ್ಷ ದೊಡ್ಡವರು.