Nikita and Patiala House Court 
ಸುದ್ದಿಗಳು

ನಿಕಿತಾ ಜೇಕಬ್ ಜಾಮೀನು ಅರ್ಜಿ: ಸಮಗ್ರ ಪ್ರತಿಕ್ರಿಯೆ ನೀಡಲು ಪೊಲೀಸರಿಗೆ ಸಮಯಾವಕಾಶ ಒದಗಿಸಿದ ದೆಹಲಿ ನ್ಯಾಯಾಲಯ

ಪ್ರತಿಕ್ರಿಯೆಯ ಪ್ರತಿಯನ್ನು ಮುಂಚಿತವಾಗಿ ನಿಕಿತಾ ಅವರಿಗೆ ನೀಡಬೇಕೆಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ನಿರ್ದೇಶನ ನೀಡಿದರು.

Bar & Bench

ಟೂಲ್‌ಕಿಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ನಿಕಿತಾ ಜೇಕಬ್‌ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸಮಗ್ರ ಪ್ರತಿಕ್ರಿಯೆ ನೀಡಲು ದೆಹಲಿಯ ನ್ಯಾಯಾಲಯವು ಪೊಲೀಸರಿಗೆ ಸಮಯಾವಕಾಶ ಒದಗಿಸಿದೆ. ಪ್ರತಿಕ್ರಿಯೆಯ ಪ್ರತಿಯನ್ನು ಮುಂಚಿತವಾಗಿ ನಿಕಿತಾ ಅವರಿಗೆ ನೀಡಬೇಕೆಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ನಿರ್ದೇಶನ ನೀಡಿದರು.

ಪ್ರಕರಣದ ಮತ್ತೊಬ್ಬ ಆರೋಪಿ ಶಂತನು ಅವರ ಜಾಮೀನು ಅರ್ಜಿಯನ್ನು ಮಾರ್ಚ್‌ 9ಕ್ಕೆ ಪಟ್ಟಿ ಮಾಡಲಾಗಿದೆ. ತುರ್ತಾಗಿ ವಿಚಾರಣೆ ನಡೆಸುವ ಸಲುವಾಗಿ ಈ ಅರ್ಜಿಯನ್ನು ಅದೇ ದಿನ ವಿಚಾರಣೆಗೆ ಪಟ್ಟಿ ಮಾಡಬಹುದು ಎಂದು ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಇರ್ಫಾನ್‌ ಅಹ್ಮದ್‌ ಹೇಳಿದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಿಕಿತಾ ಪರ ಹಿರಿಯ ವಕೀಲೆ ರೆಬೆಕಾ ಜಾನ್‌ ಒಂದೇ ದಿನಾಂಕ ವಿಚಾರಣೆ ನಡೆಸುವುದರಿಂದ ವಿಷಯ ತಳಕು ಹಾಕಿಕೊಳ್ಳುತ್ತದೆ ಎಂದು ವಾದಿಸಿದರು. ಆದರೆ ಇದಕ್ಕೆ ಒಪ್ಪದ ನ್ಯಾ. ರಾಣಾ ಅವರು ನಿಮ್ಮ 'ಆತಂಕ' ಏನೆಂದು ನಮಗೆ ತಿಳಿಯುತ್ತಿಲ್ಲ ಎಂದು ಹೇಳಿ ಮಾರ್ಚ್ 9ರಂದೇ ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿಕಿತಾ ಅವರ ಮಧ್ಯಂತರ ರಕ್ಷಣಾ ಅವಧಿ ಮಾರ್ಚ್ 10ಕ್ಕೆ ಕೊನೆಗೊಳ್ಳುತ್ತದೆ ಎಂದು ರೆಬೆಕಾ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಶಂತನು ಅವರ ಮಧ್ಯಂತರ ರಕ್ಷಣಾ ಅವಧಿಯನ್ನು ನ್ಯಾಯಾಲಯ‌ ಮಾರ್ಚ್ 9ರವರೆಗೆ ವಿಸ್ತರಿಸಿತ್ತು. ಪ್ರಕರಣದ ಮತ್ತೊಬ್ಬ ಆರೋಪಿ ಪರಿಸರ ಹೋರಾಟಗಾರ್ತಿ ಬೆಂಗಳೂರಿನವರಾದ ದಿಶಾ ರವಿ ಅವರಿಗೆ ಈಗಾಗಲೇ ಜಾಮೀನು ದೊರೆತಿದೆ.