Nirmala Sitharaman Facebook
ಸುದ್ದಿಗಳು

ಮಾನಹಾನಿ ಪ್ರಕರಣ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ನೋಟಿಸ್‌

ನಿರ್ಮಲಾ ಸೀತಾರಾಮನ್‌ ಅವರು ಚುನಾವಣೆಯ ಸಂದರ್ಭದಲ್ಲಿ ತನ್ನ ಮತ್ತು ಸೋಮನಾಥ್‌ ಭಾರ್ತಿ ನಡುವಿನ ವೈವಾಹಿಕ ಭಿನ್ನಾಭಿಪ್ರಾಯದ ಬಗ್ಗೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು ಎಂದು ಭಾರ್ತಿ ಅವರ ಪತ್ನಿ ಲಿಪಿಕಾ ಆರೋಪಿಸಿದ್ದಾರೆ

Bar & Bench

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸೋಮನಾಥ್ ಭಾರ್ತಿ ಅವರ ಪತ್ನಿ ಲಿಪಿಕಾ ಮಿತ್ರಾ ಹೂಡಿರುವ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ನಿರ್ಮಲಾ ಸೀತಾರಾಮನ್‌ ಅವರು 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತನ್ನ ಮತ್ತು ಸೋಮನಾಥ್‌ ಭಾರ್ತಿ ಅವರ ವೈವಾಹಿಕ ಭಿನ್ನಾಭಿಪ್ರಾಯದ ಬಗ್ಗೆ "ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಮಾನಹಾನಿಕರವೂ ಅವಹೇಳನಕಾರಿಯೂ ಆದ ಹೇಳಿಕೆಗಳನ್ನು ನೀಡಿದ್ದಾರೆ ಹಾಗೂ ಪ್ರಕಟಿಸಿದ್ದಾರೆ" ಎಂದು ಮಿತ್ರಾ ಆರೋಪಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ, ನಿರ್ಮಲಾ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ದೆಹಲಿ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಪರಾಸ್ ದಲಾಲ್ ಅವರು ಮೇ 19 ರಂದು ಹೊರಡಿಸಿದ ಆದೇಶದಲ್ಲಿ, ಪ್ರಸ್ತಾವಿತ ಆರೋಪಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ನಿಬಂಧನೆಗಳ ಅಡಿಯಲ್ಲಿ ನೋಟಿಸ್ ನೀಡಲು ಸೂಚಿಸಿದರು.

"ಪ್ರಕರಣವು ಸಂಜ್ಞೇಯ ವಿಚಾರಣಾ ಹಂತದಲ್ಲಿದ್ದು, ಬಿಎನ್‌ಎಸ್‌ಎಸ್‌ನ ಸೆಕ್ಷನ್ 223 ರ ಮೊದಲ ನಿಬಂಧನೆಯ ಅಡಿ ಪ್ರಸ್ತಾವಿತ ಆರೋಪಿಗೆ (ನಿರ್ಮಲಾ ಸೀತಾರಾಮನ್) ತಮ್ಮ ವಾದವನ್ನು ಮಂಡಿಸಲು ಅವಕಾಶ ನೀಡಬೇಕಿದೆ. ಅದರಂತೆ, ಇಂದಿನಿಂದ 3 ದಿನಗಳಲ್ಲಿ ಪಿಎಫ್ (ಕೋರ್ಟ್‌ ಪ್ರಕ್ರಿಯಾ ಶುಲ್ಕ) ಪಾವತಿ ನಂತರ, ಪ್ರಸ್ತಾವಿತ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಬೇಕು" ಎಂದು ನ್ಯಾಯಾಧೀಶರು ಆದೇಶಿಸಿದರು. ಪ್ರಕರಣದ ಮುಂದಿನ ವಿಚಾರಣೆ ಜೂನ್ 12 ರಂದು ನಡೆಯಲಿದೆ.

ನಿರ್ಮಲಾ ಸೀತಾರಾಮನ್‌ ಅವರು 2024ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋಮನಾಥ್‌ ಭಾರ್ತಿ ಹಾಗೂ ಅವರ ಪತ್ನಿ ಲಿಪಿಕಾ ಮಿತ್ರಾ ಅವರ ವೈವಾಹಿಕ ಭಿನ್ನಾಭಿಪ್ರಾಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಆ ಮೂಲಕ ಅವರ ಸಾರ್ವಜನಿಕ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪೂರಕವಾಗುವಂತೆ ನಡೆದುಕೊಂಡಿದ್ದರು ಎನ್ನುವುದು ಮಿತ್ರಾ ಅವರ ಆರೋಪ.

ಎಲ್ಲ ವೈವಾಹಿಕ ಸಂಬಂಧಗಳಲ್ಲಿ ಉಂಟಾಗುವಂತೆ ಕೆಲವೊಂದ ಸಮಸ್ಯೆಗಳು ನಮ್ಮ ನಡುವೆಯೂ ಮೂಡಿತ್ತು. ಅದನ್ನು ಅತಿಯಾಗಿ ವೈಭವೀಕರಿಸುವ ಮೂಲಕ ಮಾಧ್ಯಮ ವಿಚಾರಣೆಯ ಸ್ವರೂಪ ಪಡೆಯುವಂತೆ ಮಾಡಲಾಯಿತು. ಆದರೆ, ಹಿತೈಷಿಗಳು, ಸ್ನೇಹಿತರ ಒತ್ತಾಸೆಯಿಂದ ಸಮಸ್ಯೆ ಪರಿಹಾರಗೊಂಡು ತಾನು ಮತ್ತೆ ಪತಿ ಸೋಮನಾಥ್ ಭಾರ್ತಿಯವರೊಂದಿಗೆ ಸಂತಸದಿಂದ ವೈವಾಹಿಕ ಜೀವನದಲ್ಲಿ ಮುಂದುವರೆದೆ. ಆದರೆ, ನಾವು ಜೊತೆಯಾದ ಈ ವಿಚಾರವನ್ನು ತಿಳಿಸದೆ ಮುಚ್ಚಿಟ್ಟು, ತಮ್ಮ ವೈವಾಹಿಕ ಭಿನ್ನಾಭಿಪ್ರಾಯದ ಬಗ್ಗೆ ಮಾತ್ರವೇ ಒತ್ತು ನೀಡಿ ನಿರ್ಮಲಾ ಸೀತಾರಾಮನ್‌ ಪ್ರಚಾರದ ವೇಳೆ, ಸುದ್ದಿಗೋಷ್ಠಿಗಳಲ್ಲಿ ಮಾತನಾಡಿದ್ದರು ಎನ್ನುವುದು ಮಿತ್ರಾ ಅವರ ದೂರಿನ ಸಾರವಾಗಿದೆ.

ತನ್ನ ಗಂಡನ ಸಾರ್ವಜನಿಕ ವ್ಯಕ್ತಿತ್ವ ಹಾಗೂ ಅವರೆಡೆಗೆ ಸಮಾಜದಲ್ಲಿ ಇರುವ ಸದ್ಭಾವನೆಗೆ ಕಳಂಕ ತರುವ ಉದ್ದೇಶವನ್ನು ನಿರ್ಮಲಾ ಅವರ ಹೇಳಿಕೆಗಳು ಹೊಂದಿದ್ದವು ಎಂದು ಮಿತ್ರಾ ಆರೋಪಿಸಿದ್ದಾರೆ.