Arvind Kejriwal and Tihar Jail 
ಸುದ್ದಿಗಳು

ಇ ಡಿ ಮಾವು ವಾದ: ಕೇಜ್ರಿವಾಲ್ ಮನೆ ಊಟ ನಿಗದಿತ ಆಹಾರಕ್ಕಿಂತ ಬೇರೆಯಾಗಿದೆ ಎಂದ ದೆಹಲಿ ನ್ಯಾಯಾಲಯ

ಜಾಮೀನು ಪಡೆಯುವುದಕ್ಕಾಗಿ ಮಧುಮೇಹಿ ಕೇಜ್ರಿವಾಲ್ ತಮ್ಮ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವು, ಸಿಹಿ ಪದಾರ್ಥ ತಿನ್ನುತ್ತಿದ್ದಾರೆ ಎಂದು ಈ ಹಿಂದೆ ಇ ಡಿ ಆರೋಪಿಸಿತ್ತು.

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ತಿಹಾರ್‌ ಜೈಲಿನಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಮ್ಮ ಮನೆಯಿಂದ ಕಳುಹಿಸಲಾಗುತ್ತಿರುವ ಆಹಾರ ಜೈಲು ಅಧಿಕಾರಿಗಳು ಸೂಚಿಸಿದ ಆಹಾರ ಕ್ರಮಕ್ಕೆ ಅನುಗುಣವಾಗಿ ಇಲ್ಲ ಎಂದು ದೆಹಲಿ ನ್ಯಾಯಾಲಯ ಶುಕ್ರವಾರ ಹೇಳಿದೆ.

ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚಿಸಿ ಜೈಲು ಅಧಿಕಾರಿಗಳು ಸೂಚಿಸಿದ ಆಹಾರ ಕ್ರಮವನ್ನು ಕೇಜ್ರಿವಾಲ್ ಅವರ ಮನೆಯಲ್ಲಿ ತಯಾರಿಸಲಾಗುತ್ತಿರುವ ಊಟದಲ್ಲಿ ಪಾಲಿಸುತ್ತಿಲ್ಲ ಎಂದು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅಸಮಾಧಾನ ವ್ಯಕ್ತಪಡಿಸಿದರು.

“ನಿಮ್ಮ ಆಹಾರ ಕ್ರಮದ ಪಟ್ಟಿ ಮತ್ತು ಜೈಲು ಅಧಿಕಾರಿಗಳ ತುಲನಾತ್ಮಕ ಪಟ್ಟಿಯನ್ನು ನನಗೆ ನೀಡಿ. ಖಂಡಿತಾ ವ್ಯತ್ಯಾಸಗಳಿವೆ ಎನಿಸುತ್ತಿದೆ” ಎಂದು ನ್ಯಾಯಾಧೀಶೆ ನುಡಿದರು.

ಮಾವು ಮತ್ತು ಆಲೂ ಪೂರಿಯಂತಹ ಸಣ್ಣ ವ್ಯತ್ಯಾಸಗಳನ್ನು ದೇಹದ ಇನ್ಸುಲಿನ್‌ಗಾಗಿ ನಾನು ಸಲ್ಲಿಸಿದ ಅರ್ಜಿಯ ವಿರುದ್ಧ ಏಕೆ ಪ್ರಸ್ತಾಪಿಸಬೇಕು ಎಂದು ಕೇಜ್ರಿವಾಲ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಎಂದು ವಾದಿಸಿದರು.

 ಜಾಮೀನು ಪಡೆಯುವುದಕ್ಕಾಗಿ ಮಧುಮೇಹಿ ಕೇಜ್ರಿವಾಲ್ ತಮ್ಮ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಮಾವು, ಸಿಹಿ ಪದಾರ್ಥ ತಿನ್ನುತ್ತಿದ್ದಾರೆ ಎಂದು ಕಳೆದ ವಿಚಾರಣೆ ವೇಳೆ ಇ ಡಿ ಆರೋಪಿಸಿತ್ತು. ಇದನ್ನು ನ್ಯಾಯಾಲಯ ಪರಿಗಣಿಸಿದೆ.

ತಮ್ಮ ಮಧುಮೇಹ ಮತ್ತು ರಕ್ತದ ಸಕ್ಕರೆಯ ಏರುಪೇರಿಗೆ ಸಂಬಂಧಿಸಿದಂತೆ ಪ್ರತಿದಿನ 15 ನಿಮಿಷಗಳ ಕಾಲ ವೈದ್ಯರೊಂದಿಗೆ ಸಮಾಲೋಚಿಸಲು ಅವಕಾಶ ನೀಡಬೇಕು. ಆ ಸಂದರ್ಭದಲ್ಲಿ ತಮ್ಮ ಪತ್ನಿ ಸುನೀತಾ ಕೇಜ್ರಿವಾಲ್‌ ಅವರು ಇರಲು ಅವಕಾಶ ನೀಡಬೇಕು ಎಂದು ಕೋರಿ ಕೇಜ್ರಿವಾಲ್‌ ನ್ಯಾಯಾಯಕ್ಕೆ ನೂತನ ಅರ್ಜಿ ಸಲ್ಲಿಸಿದ್ದರು.

ಅಂತಿಮವಾಗಿ ಆದೇಶ ಕಾಯ್ದಿರಿಸಿರುವ ನ್ಯಾಯಾಲುಯ ಏಪ್ರಿಲ್ 22, ಸೋಮವಾರ ತೀರ್ಪು ಪ್ರಕಟಿಸಲಿದೆ.

ಕೇಜ್ರಿವಾಲ್‌ ಮನೆಯೂಟ ಸೇವಿಸಲು ನ್ಯಾಯಾಧೀಶೆ ಬವೇಜಾ ಈ ಹಿಂದೆ ಅನುಮತಿಸಿದ್ದರು. ಆದರೆ ಮನೆಯಲ್ಲಿ ತಯಾರಿಸಿದ ಆಹಾರದಲ್ಲಿ ಮಧುಮೇಹ ಉಲ್ಬಣಕ್ಕೆ ಕಾರಣವಾಗುವ ಮಾವು ಹಾಗೂ ಸಿಹಿ ಪದಾರ್ಥಗಳು ಇದ್ದುದಕ್ಕೆ ಇ ಡಿ ಆಕ್ಷೇಪ ವ್ಯಕ್ತಪಡಿಸಿತ್ತು. ನ್ಯಾಯಾಲಯದ ಆದೇಶದಂತೆ ಜೈಲು ಅಧಿಕಾರಿಗಳು ಶುಕ್ರವಾರ ವರದಿ ಸಲ್ಲಿಸಿದ್ದು ಮನೆಯಲ್ಲಿ ತಯಾರಿಸಿದ ಆಹಾರ ನಿಗದಿತ ಆಹಾರ ಕ್ರಮಕ್ಕೆ ಅನುಗುಣವಾಗಿ ಇಲ್ಲ ಎಂದು ಹೇಳಿದ್ದರು.