Aakar Patel  amnesty.org
ಸುದ್ದಿಗಳು

ಅಮೆರಿಕ ಪಯಣಕ್ಕೆ ಅನುಮತಿ ಕೋರಿ ಆಕಾರ್ ಪಟೇಲ್ ಅರ್ಜಿ: ಇಂದು ಸಂಜೆ ಆದೇಶ ನೀಡಲಿರುವ ದೆಹಲಿ ನ್ಯಾಯಾಲಯ

ಅರ್ಜಿದಾರರು ಪ್ರಭಾವಿ ವ್ಯಕ್ತಿಯಾಗಿದ್ದುಅವರು ಕಾನೂನಿನಿಂದ ನುಣುಚಿಕೊಳ್ಳಲು ಅವಕಾಶವಿರುವುದರಿಂದ ಅವರ ವಿರುದ್ಧ ಎಲ್ಒಸಿ ಹೊರಡಿಸಲಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು.

Bar & Bench

ಸರ್ಕಾರೇತರ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ಅವರು ಅಮೆರಿಕಕ್ಕೆ ಪ್ರಯಾಣಿಸಲು ಅನುಮತಿ ನೀಡಬೇಕು ಮತ್ತು ತನ್ನ ವಿರುದ್ಧ ಸಿಬಿಐ ಹೊರಡಿಸಿದ ಲುಕ್ ಔಟ್ ಸುತ್ತೋಲೆ ರದ್ದುಗೊಳಿಸಬೇಕು ಎಂದು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಇಂದು ಸಂಜೆ 4 ಗಂಟೆಗೆ ಆದೇಶ ಪ್ರಕಟಿಸಲಿದೆ.

ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್ ಅವರ ಮುಂದೆ ಈ ಪ್ರಕರಣ ಪಟ್ಟಿ ಮಾಡಲಾಗಿತ್ತು. ಎರಡೂ ಕಡೆಯ ವಾದ ಆಲಿಸಲಾಗಿದ್ದು ಸಂಜೆ 4 ಗಂಟೆಗೆ ಈ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು.

ಅರ್ಜಿದಾರರು ಪ್ರಭಾವಿ ವ್ಯಕ್ತಿಯಾಗಿದ್ದುಅವರು ಕಾನೂನಿನಿಂದ ನುಣುಚಿಕೊಳ್ಳಲು ಅವಕಾಶವಿರುವುದರಿಂದ ಅವರ ವಿರುದ್ಧ ಎಲ್‌ಒಸಿ ಹೊರಡಿಸಲಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು. ಆದರೆ ನ್ಯಾಯಾಲಯ “ದೇಶದಿಂದ ಪಲಾಯನ ಮಾಡುವಂತಿದ್ದರೆ ಅರ್ಜಿದಾರರನ್ನು ಬಂಧಿಸಬಹುದಿತ್ತು ಇಲ್ಲವೇ ತನಿಖೆ ವೇಳೆ ಶ್ಯೂರಿಟಿ ತೆಗೆದುಕೊಳ್ಳಬಹುದಿತ್ತು. ಎಲ್‌ಒಸಿ ನೀಡಲು ಅಗತ್ಯವಿದ್ದ ವಿವರವಾದ ಕಾರಣಗಳನ್ನು ಒದಗಿಸಬೇಕು” ಎಂದು ಹೇಳಿತು. ಇದಕ್ಕೆ ಸಿಬಿಐ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿತು.

ಸಿಬಿಐ ವಾದವನ್ನು ಆಕಾರ್‌ ಪರ ವಕೀಲ ತನ್ವೀರ್‌ ಅಹ್ಮದ್‌ ಮೀರ್ ಬಲವಾಗಿ ವಿರೋಧಿಸಿದರು. ಪ್ರಕರಣದಲ್ಲಿ ಆಕಾರ್‌ ಪಟೇಲ್‌ ತಪ್ಪಿತಸ್ಥ ಎನ್ನುವುದನ್ನು ಸೂಚಿಸುವ ಯೋಗ್ಯ ಅಂಶಗಳಾವೂ ಸಿಬಿಐ ವಾದದಲ್ಲಿ ಇಲ್ಲ ಎಂದರು.

ಅಮೆರಿಕಕ್ಕೆ ಪ್ರಯಾಣ ಕೈಗೊಳ್ಳದಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಆಕಾರ್‌ ಅವರನ್ನು ತಡೆಯಲಾಗಿತ್ತು. ಉಪನ್ಯಾಸ ನೀಡುವಂತೆ ತಮಗೆ ಅಮೆರಿಕದ ಹಲವು ಸಂಸ್ಥೆಗಳಿಂದ ಆಹ್ವಾನ ಬಂದಿತ್ತು ಎಂದು ಆಕಾರ್‌ ಅವರು ವಿದೇಶ ಪ್ರಯಾಣ ಅನುಮತಿ ಕೋರಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.