A1
ಸುದ್ದಿಗಳು

ಆಕಾರ್ ವಿರುದ್ಧದ ಲುಕ್ ಔಟ್ ಸುತ್ತೋಲೆ ಹಿಂಪಡೆಯಲು ಸಿಬಿಐಗೆ ಆದೇಶಿಸಿದ ದೆಹಲಿ ನ್ಯಾಯಾಲಯ; ಲಿಖಿತ ಕ್ಷಮಾಪಣೆಗೆ ಸೂಚನೆ

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್ ಅವರು ಪ್ರಕರಣದ ಅನುಪಾಲನಾ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದರು.

Bar & Bench

ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯಡಿ ದಾಖಲಿಸಿದ್ದ ಪ್ರಕರಣದಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ಅವರ ವಿರುದ್ಧ ಹೊರಡಿಸಲಾದ ಲುಕ್ ಔಟ್ ಸುತ್ತೋಲೆಯನ್ನು ಹಿಂಪಡೆಯುವಂತೆ ಸಿಬಿಐಗೆ ದೆಹಲಿ ನ್ಯಾಯಾಲಯ ಆದೇಶಿಸಿದೆ [ಆಕಾರ್ ಪಟೇಲ್ ಮತ್ತು ಸಿಬಿಐ ನಡುವಣ ಪ್ರಕರಣ].

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್ ಅವರು ಪ್ರಕರಣದ ಅನುಪಾಲನಾ ವರದಿ ಸಲ್ಲಿಸುವಂತೆ ಕೂಡ ಸಿಬಿಐಗೆ ಸೂಚಿಸಿದರು.

ಬಹುಮುಖ್ಯವಾಗಿ ನ್ಯಾಯಾಲಯವು ಸಿಬಿಐ ನಿರ್ದೇಶಕರಿಗೆ ಅವರ ಅಧೀನ ಅಧಿಕಾರಿಯಿಂದ ಉಂಟಾಗಿರುವ ಲೋಪದ ಕಾರಣಕ್ಕೆ ಅರ್ಜಿದಾರರಿಗೆ (ಆಕಾರ್‌ ಪಟೇಲ್‌) ಕ್ಷಮಾಣಪಣೆ ಪತ್ರ ಬರೆಯುವಂತೆ ಸೂಚಿಸಿದೆ. "ತಮ್ಮ ಅಧೀನ ಅಧಿಕಾರಿಯ ಲೋಪವನ್ನು ಮನಗಂಡು ಸಿಬಿಐ ನಿರ್ದೇಶಕರು ಲಿಖಿತ ಕ್ಷಮಾಪಣಾ ಪತ್ರವನ್ನುಬರೆಯುವುದು ಅರ್ಜಿದಾರರ ನೋವು ಮಾಯುವಂತೆ ಮಾಡುವುದು ಮಾತ್ರವೇ ಅಲ್ಲದೆ ಪ್ರತಿಷ್ಠಿತ ಸಂಸ್ಥೆಯ (ಸಿಬಿಐ) ಕುರಿತು ಸಾರ್ವಜನಿಕರಲ್ಲಿ ವಿಶ್ವಾಸ ಮತ್ತು ನಂಬಿಕೆಯನ್ನು ಎತ್ತಿಹಿಡಿಯುತ್ತದೆ" ಎಂದು ಅದು ಸ್ಪಷ್ಟ ಶಬ್ದಗಳಲ್ಲಿ ಹೇಳಿದೆ.

ಅಮೆರಿಕಕ್ಕೆ ಪ್ರಯಾಣ ಕೈಗೊಳ್ಳದಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಆಕಾರ್‌ ಅವರನ್ನು ತಡೆಹಿಡಿಯಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಇಂದು ಬೆಳಗ್ಗೆ ನಡೆದ ವಿಚಾರಣೆ ವೇಳೆ ಸಿಬಿಐ ಎಫ್‌ಸಿಆರ್‌ಎ ನಿಯಮಗಳ ಅಡಿ ಪಟೇಲ್ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು, ಆದರೆ ಕಾನೂನಿನ ಸೆಕ್ಷನ್ 40 ರ ಅಡಿಯಲ್ಲಿ ಕೇಂದ್ರ ಸರ್ಕಾರದ ಅಗತ್ಯ ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿಸಿತ್ತು. ಕೇಂದ್ರದ ಅನುಮತಿಯ ನಂತರವೇ ನ್ಯಾಯಾಲಯ ಆರೋಪಪಟ್ಟಿ ಪರಿಣಿಸಬೇಕಾಗುತ್ತದೆ ಎಂದು ಹೇಳಿತ್ತು.

ಆದರೆ ನ್ಯಾಯಾಲಯ “ದೇಶದಿಂದ ಪಲಾಯನ ಮಾಡುವಂತಿದ್ದರೆ ಅರ್ಜಿದಾರರನ್ನು ಬಂಧಿಸಬಹುದಿತ್ತು ಇಲ್ಲವೇ ತನಿಖೆ ವೇಳೆ ಶ್ಯೂರಿಟಿ ತೆಗೆದುಕೊಳ್ಳಬಹುದಿತ್ತು. ಎಲ್‌ಒಸಿ ನೀಡಲು ಅಗತ್ಯವಿದ್ದ ವಿವರವಾದ ಕಾರಣಗಳನ್ನು ಒದಗಿಸಬೇಕು” ಎಂದು ಹೇಳಿತು. ಇದಕ್ಕೆ ಸಿಬಿಐ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿತ್ತು.