Arvind Kejriwal  
ಸುದ್ದಿಗಳು

ಅರವಿಂದ್ ಕೇಜ್ರಿವಾಲ್ ಮಾವು, ಸಿಹಿ ತಿನಿಸು ಸ್ವೀಕರಿಸಿದ್ದು ಏಕೆ? ದೆಹಲಿ ಹೈಕೋರ್ಟ್ ಪ್ರಶ್ನೆ

Bar & Bench

ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಅವರ ಕುಟುಂಬ  ವೈದ್ಯಕೀಯವಾಗಿ ಸೂಚಿಸಲಾದ ಆಹಾರಕ್ರಮಕ್ಕೆ ಅನುಗುಣವಾಗಿರದಂತಹ ಮಾವು, ಸಿಹಿ ತಿನಿಸು ಹಾಗೂ ಆಲೂ ಪೂರಿಯನ್ನು ಜೈಲಿಗೆ ಕಳಿಸಿದ್ದು ಏಕೆ ಎಂಬುದು ತನಗೆ ಅರ್ಥವಾಗದ ಸಂಗತಿಯಾಗಿದೆ ಎಂದು ದೆಹಲಿ ನ್ಯಾಯಾಲಯ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.

ಕೇಜ್ರಿವಾಲ್ ಮಧುಮೇಹ ರೋಗಿಯಾಗಿದ್ದು, ವೈದ್ಯಕೀಯ ತಜ್ಞರು ನಿಗದಿಪಡಿಸಿದ ಆಹಾರಕ್ರಮ ಅವರು ಮನೆಯಿಂದ ಸ್ವೀಕರಿಸಿರುವ ಆಹಾರಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೇಜ್ರಿವಾಲ್ ಅವರ ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡು ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸಲು ಅವರಿಗೆ ಏಪ್ರಿಲ್ 1 ರಂದು ನ್ಯಾಯಾಲಯ ಅನುವು ಮಾಡಿಕೊಟ್ಟಿತ್ತು. ಆದರೆ ಮನೆಯಲ್ಲಿ ತಯಾರಿಸಿದ ಊಟ ಕೆಲವು ಬಾರಿ ವೈದ್ಯಕೀಯ ತಂಡ ಸೂಚಿಸಿದ ಆಹಾರಕ್ಕೆ ವ್ಯತಿರಿಕ್ತವಾಗಿದೆ ಎಂಬುದು ಬೆಳಕಿಗೆ ಬಂದಿತ್ತು.

ವೈದ್ಯಕೀಯ ಸಲಹೆಯ ಭಾಗವಾಗಿರದ ಇಂತಹ ಆಹಾರ ಪದಾರ್ಥಗಳನ್ನು ಅನುಮತಿಸಿದ ಜೈಲು ಅಧಿಕಾರಿಗಳನ್ನು ಸಹ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಪ್ರಶ್ನಿಸಿದರು.

ಕೇಜ್ರಿವಾಲ್‌ ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುತ್ತಿದ್ದಾರೆ ಎಂಬುದು ಜೈಲು ಅಧಿಕಾರಿಗಳಿಗೆ ಸದಾ ತಿಳಿದಿತ್ತು. ಆದರೆ ಆದೇಶ ಪಾಲಿಸದಿರುವುದನ್ನು ಅಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತಂದಿಲ್ಲ ಇಲ್ಲವೇ ಸಲಹೆಗೆ ಹೊರತಾದ ಆಹಾರ ಸೇವಿಸದಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ನ್ಯಾಯಾಲಯ ನುಡಿಯಿತು.

ಸಕ್ಕರೆ ಕಾಯಿಲೆ ಮತ್ತು ರಕ್ತದಲ್ಲಿ ರಕ್ತದ ಪ್ರಮಾಣ ಪರೀಕ್ಷಿಸಲು ಪ್ರತಿದಿನ 15 ನಿಮಿಷಗಳ ಕಾಲ ತಮ್ಮ  ವೈದ್ಯರನ್ನು ಭೇಟಿಯಾಗಲು ತಮಗೆ ಅವಕಾಶ ನೀಡಲು ತಿಹಾರ್‌ ಜೈಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಕೇಜ್ರಿವಾಲ್‌ ಅವರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಕೇಜ್ರಿವಾಲ್ ಅವರು ವೈದ್ಯಕೀಯ ಆಧಾರದಲ್ಲಿ ಜಾಮೀನು ಪಡೆಯುವುದಕ್ಕಾಗಿ ಉದ್ದೇಶಪೂರ್ವಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿ ತಿನಿಸು ಹಾಗೂ ಸಕ್ಕರೆಯುಕ್ತ ಚಹಾ ಸೇವಿಸುತ್ತಿದ್ದಾರೆ ಎಂದು ಇ ಡಿ ಕಳೆದ ವಾರ ಆರೋಪಿಸಿತ್ತು.

ಸೋಮವಾರ ನೀಡಿದ ಆದೇಶದಲ್ಲಿ ನ್ಯಾಯಾಲಯ ಮಾವು ಸೇವನೆ ಕುರಿತಂತೆ ವಿವರವಾದ ಅವಲೋಕನಗಳನ್ನು ಮಾಡಿತು.

ಕೇಜ್ರಿವಾಲ್ ಅಣಬೆ ತಿಂದಿದ್ದರೆ ಮಾವು ತಿನ್ನುತ್ತಿರಲಿಲ್ಲ ಎಂಬ ಅವರ ಪರ ವಕೀಲರ ವಾದವನ್ನು ಒಪ್ಪದ ನ್ಯಾಯಾಲಯ ಅಣಬೆಯನ್ನು ಅವರ ಸ್ವಂತ ವೈದ್ಯರು ಶಿಫಾರಸು ಮಾಡಿದ್ದರು ಆದರೆ ಮಾವಿನ ಕುರಿತು ಯಾವುದೇ ನಿರ್ದಿಷ್ಟ ಶಿಫಾರಸು ಇರಲಿಲ್ಲ ಎಂದಿತು.  

ಬಿಳಿ ಅಕ್ಕಿ ಅಥವಾ ಕಂದು ಅಕ್ಕಿಗೆ ಹೋಲಿಸಿದರೆ ಮಾವಿನ ಗ್ಲೈಸೆಮಿಕ್ ಸೂಚ್ಯಂಕ  ಕಡಿಮೆ ಎಂಬ ಕೇಜ್ರಿವಾಲ್‌ ಪರ ವಕೀಲರ ವಾದ ಕೂಡ ತಪ್ಪು. ಏಕೆಂದರೆ ಕೇಜ್ರಿವಾಲ್‌ ಅವರ ಸ್ವಂತ ವೈದ್ಯರೇ ಮಾವಿನ ಹಣ್ಣು ಸೇವಿಸಲು ಶಿಫಾರಸು ಮಾಡಿರಲಿಲ್ಲ ಎಂದು ನುಡಿಯಿತು.

ಇನ್ನು ಇನ್ಸುಲಿನ್‌ ನೀಡುವಂತೆ ಕೇಜ್ರಿವಾಲ್‌ ಅವರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯ ರಕ್ತದಲ್ಲಿನ ಸಕ್ಕರೆಯ ಮಟ್ಟ ಕುರಿತು ಅವರು ಸಲ್ಲಿಸಿದ ವೈದ್ಯಕೀಯ ವರದಿ ಮತ್ತು ಜೈಲು ವೈದ್ಯರ ವೈದ್ಯಕೀಯ ವರದಿ ನಡುವೆ ಅಂತರ ಇದೆ ಎಂದು ಹೇಳಿತು.

ಕೇಜ್ರಿವಾಲ್ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಜೈಲು ಅಧಿಕಾರಿಗಳು ಸಂಪೂರ್ಣ ಸಿದ್ಧರಿದ್ದು ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ರಕ್ತದೊತ್ತಡದ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದ ನ್ಯಾಯಾಲಯ ಕೇಜ್ರಿವಾಲ್‌ ಅವರನ್ನು ಉಳಿದ ಕೈದಿಗಳಿಗಿಂತಲೂ ಭಿನ್ನವಾಗಿ ಪರಿಗಣಿಸಲಾಗದು ಎಂದಿತು.

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಕೇಜ್ರಿವಾಲ್ ತಮ್ಮ ಬಂಧನವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.