ಸುದ್ದಿಗಳು

ಕೊಲೆ ಪ್ರಕರಣ: ಒಲಿಂಪಿಕ್ ಕುಸ್ತಿಪಟು ಸುಶೀಲ್ ಕುಮಾರ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

Bar & Bench

ಯುವ ಕುಸ್ತಿಪಟು ಒಬ್ಬರನ್ನು ಥಳಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ನ್ಯಾಯಾಲಯವೊಂದು ಒಲಿಂಪಿಕ್‌ ಕುಸ್ತಿಪಟು ಸುಶೀಲ್ ಕುಮಾರ್‌ಗೆ ಜಾಮೀನು ನೀಡಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ತನಿಖೆಯ ಸ್ಥಿತಿ ಗಮನಿಸಿ ಈ ಹಂತದಲ್ಲಿ ಕುಮಾರ್‌ಗೆ ನಿರೀಕ್ಷಣಾ ಜಾಮೀನು ನೀಡಲಾಗದು ಎಂದು ರೋಹಿಣಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಗದೀಶ್ ಕುಮಾರ್ ಅಭಿಪ್ರಾಯಪಟ್ಟರು.

ತನಿಖೆ ಇನ್ನೂ ಮುಂದುವರೆದಿದ್ದು ಕೆಲವು ಆರೋಪಿಗಳನ್ನು ಈಗಲೂ ಬಂಧಿಸಿಲ್ಲ. ಅರ್ಜಿದಾರರ ವಿರುದ್ಧ ಈಗಾಗಲೇ ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಗಿದೆ. ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದಂತೆ ಈಗ ಯಾವುದೇ ನಿರ್ದೇಶನ ನೀಡುವುದರಿಂದ ಪಕ್ಷಕಾರರ ಬಗ್ಗೆ ಪೂರ್ವಾಗ್ರಹಪೀಡಿತವಾದಂತಾಗುತ್ತದೆ. ಅಲ್ಲದೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳೂ ಇವೆ. ಹೀಗಾಗಿ ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂಬುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.

ಸುಶೀಲ್ ಕುಮಾರ್ ವಿರುದ್ಧದ ಆರೋಪಗಳು ಸ್ವಭಾವತಃ ಗಂಭೀರವಾಗಿವೆ ಎಂದು ಕೋರ್ಟ್ ಹೇಳಿದ್ದು ಮೇಲ್ನೋಟಕ್ಕೆ ಅವರು ಪ್ರಕರಣದ ಮುಖ್ಯ ಸಂಚುಕೋರ ಎಂಬುದನ್ನು ಸಾಕ್ಷ್ಯಗಳು ತೋರಿಸಿವೆ ಎಂದು ನ್ಯಾಯಾಲಯ ವಿವರಿಸಿದೆ.

ಇತ್ತ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಸುಶೀಲ್‌ ಕುಮಾರ್‌ ಪರ ವಕೀಲ ಸಿದ್ಧಾರ್ಥ್‌ ಲೂಥ್ರಾ ತಮ್ಮ ಕಕ್ಷೀದಾರನ ವಿರುದ್ಧದ ಆರೋಪಗಳು ಸುಳ್ಳಾಗಿದ್ದು ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸುವುದು ಆರು ಗಂಟೆಗಳಷ್ಟು ವಿಳಂಬವಾಗಿದೆ. ಕೃತ್ಯದ ಹಿಂದೆ ಯಾವುದೇ ಉದ್ದೇಶ ಇರುವುದನ್ನು ಅಥವಾ ಸುಶೀಲ್‌ ಕುಮಾರ್‌ ಪಾತ್ರ ಇರುವುದನ್ನು ದೆಹಲಿ ಪೊಲೀಸರು ಸಾಬೀತು ಪಡಿಸಿಲ್ಲ ಎಂದರು.

ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅತುಲ್‌ ಶ್ರೀವಾಸ್ತವ ಅವರ ಪ್ರಕಾರ ಸೋನು ಎಂಬ ವ್ಯಕ್ತಿಯನ್ನು ಸುಶೀಲ್‌ ಕುಮಾರ್‌ ಮತ್ತಿತರರು ಛತ್ರಸಾಲ್‌ ಕ್ರೀಡಾಂಗಣಕ್ಕೆ ಕರೆದೊಯ್ದು ಬಂದೂಕಿನಿಂದ ಬೆದರಿಸಿದರು. ಅಲ್ಲದೆ ನಿರ್ದಯವಾಗಿ ಥಳಿಸಿದರು. ಸುಶೀಲ್‌ ಕುಮಾರ್‌ ಮೃತ ವ್ಯಕ್ತಿಗೆ ದೊಣ್ಣೆಯಿಂದ ಹೊಡೆದಿದ್ದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿತ್ತು. ಘಟನಾ ಸರಣಿಯನ್ನು ಇಡಿಯಾಗಿ ಪತ್ತೆಹಚ್ಚಲು ಕೃತ್ಯ ಎಸಗಲು ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲು ಸುಶೀಲ್‌ ಕುಮಾರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಅಗತ್ಯ ಎಂದು ವಾದಿಸಲಾಗಿತ್ತು.