Rahul Gandhi, Sonia Gandhi and ED 
ಸುದ್ದಿಗಳು

ನ್ಯಾಷನಲ್ ಹೆರಾಲ್ಡ್ ಪ್ರಕರಣ: ರಾಹುಲ್, ಸೋನಿಯಾಗೆ ನೋಟಿಸ್ ನೀಡಲು ದೆಹಲಿ ನ್ಯಾಯಾಲಯ ನಕಾರ

ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಮಾಡಲಾಗಿತ್ತು.

Bar & Bench

ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತಿತರರಿಗೆ ಸದ್ಯಕ್ಕೆ ನೋಟಿಸ್ ನೀಡಲು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ.

ಹೆಚ್ಚಿನ ದಾಖಲೆಗಳನ್ನು ಸಲ್ಲಿಸಿ ದೋಷಗಳನ್ನು ಸರಿಪಡಿಸುವಂತೆ ಭ್ರಷ್ಟಾಚಾರ ಕಾಯಿದೆಯಡಿ ರೂಪುಗೊಂಡಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ಸೂಚಿಸಿದರು.

ಕಾಯಿದೆ ಪ್ರಕಾರ ಆರೋಪಿಗಳ ವಿಚಾರಣೆ ನಡೆಸದೆ ಆರೋಪ ಪಟ್ಟಿ ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ಗಾಂಧಿ ಕುಟುಂಬ ಮತ್ತಿತರರಿಗೆ ನೋಟಿಸ್ ನೀಡಬೇಕು ಎಂದು ಇ ಡಿ ವಾದಿಸಿತ್ತು.

ಆದರೆ, ಹಾಗೆ ನೋಟಿಸ್‌ ನೀಡುವ ಮೊದಲು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ನ್ಯಾಯಾಧೀಶ ಗೋಗ್ನೆ ಹೇಳಿದರು. "ನಾನು ತೃಪ್ತಿ ಹೊಂದದೆ ಅಂತಹ ಆದೇಶ ನೀಡಲು ಸಾಧ್ಯವಿಲ್ಲ" ಎಂದು ನ್ಯಾಯಾಧೀಶರು ಹೇಳಿದರು.

ಮೇ 2ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಒಡೆತನ ಹೊಂದಿದ್ದ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ಗೆ (ಎಜೆಎಲ್‌) ಕಾಂಗ್ರೆಸ್‌ ಪಕ್ಷ ₹ 90 ಕೋಟಿಯಷ್ಟು ಸಾಲ ನೀಡಿತ್ತು. ಯಂಗ್‌ ಇಂಡಿಯಾ ಸಂಸ್ಥೆ ಕಾಂಗ್ರೆಸ್‌ಗೆ ಕೇವಲ ₹ 50 ಲಕ್ಷ ಹಣ ನೀಡಿ ಎಜೆಎಲ್‌ ಕಾಂಗ್ರೆಸ್‌ಗೆ ನೀಡಬೇಕಿದ್ದ ₹ 90 ಕೋಟಿಯಷ್ಟು ಹಣ ಹಿಂಪಡೆಯಬೇಕಾದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು ಎಂಬುದು ಹಗರಣದ ಸಾರ. ಈಕ್ವಿಟಿ ವಹಿವಾಟಿನಲ್ಲಿ ₹2,000 ಕೋಟಿಗೂ ಅಧಿಕ ಆಸ್ತಿ ಅವ್ಯವಹಾರ ನಡೆದಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಸೋನಿಯಾ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಗಾಂಧಿ ಕುಟುಂಬದ ನಿಯಂತ್ರಣದಲ್ಲಿರುವ - ಯಂಗ್ ಇಂಡಿಯನ್ ಲಿಮಿಟೆಡ್‌ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಖಾಸಗಿ ದೂರು ದಾಖಲಿಸಿ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ಆಸ್ತಿ ದುರುಪಯೋಗದ ಆರೋಪ ಮಾಡಿದ್ದರು.