Brij Bhushan Sharan Singh and Rouse avenue court  
ಸುದ್ದಿಗಳು

ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪ ಕುರಿತು ಹೆಚ್ಚಿನ ತನಿಖೆ: ಬ್ರಿಜ್ ಭೂಷಣ್ ಮನವಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ಆರೋಪಗಳ ಕುರಿತು ಹೆಚ್ಚಿನ ತನಿಖೆಗಾಗಿ ಸಿಂಗ್ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿದ ದೆಹಲಿ ಪೊಲೀಸರು, ಇದೊಂದು ವಿಳಂಬ ತಂತ್ರ ಎಂದು ದೂರಿದರು.

Bar & Bench

ಮಹಿಳಾ ಕುಸ್ತಿಪಟುಗಳು ತಮ್ಮ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪದ ಕುರಿತು ಹೆಚ್ಚಿನ ತನಿಖೆ ನಡೆಸಲು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ  ಬಿಜೆಪಿ ಸಂಸದ ಹಾಗೂ ಭಾರತ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.

ಬ್ರಿಜ್‌ ಭೂಷಣ್‌ ವಿರುದ್ಧ ಆರೋಪ ನಿಗದಿ ಸಂಬಂಧ  ಮೇ 7 ರಂದು ಆದೇಶ ಪ್ರಕಟಿಸಲಾಗುವುದು ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ರಜಪೂತ್ ಅವರು ಹೇಳಿದರು. 

ತಮ್ಮ ವಿರುದ್ಧ ಆರೋಪ ನಿಗದಿಯಾಗಬೇಕಿದ್ದ ಏಪ್ರಿಲ್ 18ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಬ್ರಿಜ್‌ ಭೂಷಣ್‌ ತನ್ನ ವಿರುದ್ಧ ದೂರು ನೀಡಿರುವ ಕುಸ್ತಿಪಟುಗಳಲ್ಲಿ ಒಬ್ಬರು ಲೈಂಗಿಕ ಕಿರುಕುಳಕ್ಕೆ ಒಳಗಾದಾಗ ತಾನು ದೆಹಲಿಯಲ್ಲಿ ಇರಲಿಲ್ಲ. ಹೀಗಾಗಿ ಈ ಅಂಶವನ್ನು ತನಿಖೆ ಮಾಡುವಂತೆ ನಿರ್ದೇಶಿಸಬೇಕು. ಕರೆ ವಿವರಗಳ ದಾಖಲೆಗಳನ್ನು (ಸಿಡಿಆರ್‌) ದಾಖಲೆಯಲ್ಲಿ ಸಲ್ಲಿಸಲು ಸೂಚಿಸಬೇಕು ಎಂದು ಕೋರಿದ್ದರು.

ಅರ್ಜಿಯನ್ನು ವಿರೋಧಿಸಿದ ದೆಹಲಿ ಪೊಲೀಸರು, ಇದೊಂದು ವಿಳಂಬ ತಂತ್ರ ಎಂದು ದೂರಿದರು.

ಸಿಂಗ್ ವಿರುದ್ಧ ಆರು ಕುಸ್ತಿಪಟುಗಳು ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಐಪಿಸಿ ಸೆಕ್ಷನ್‌  354 (ಘನತೆಗೆ ಧಕ್ಕೆ), 354ಎ (ಲೈಂಗಿಕ ಛಾಯೆಯ ಮಾತುಗಳು), 354 ಡಿ (ಹಿಂಬಾಲಿಸುವಿಕೆ) ಹಾಗೂ 506 (1) (ಕ್ರಿಮಿನಲ್‌ ಬೆದರಿಕೆ) ಅಡಿಯಲ್ಲಿ ಸಿಂಗ್ ವಿರುದ್ಧ ಜೂನ್ 15, 2023ರಂದು, ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.

ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೂರುದಾರರು ಈ ಹಿಂದೆ ಸುಪ್ರೀಂ ಕೋರ್ಟ್‌ಮೊರೆ ಹೋದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು.

ಅಪ್ರಾಪ್ತ ವಯಸ್ಸಿನ ಮಹಿಳಾ ಕುಸ್ತಿಪಟು ಕೂಡ ಸಿಂಗ್ ವಿರುದ್ಧ ಆರೋಪ ಮಾಡಿದ್ದರು. ಆದರೆ ಆಕೆ ನಂತರ ತನ್ನ ದೂರನ್ನು ಹಿಂಪಡೆದಿದ್ದರು. ಈ ಹಿನ್ನೆಲೆಯಲ್ಲಿ ಸಿಂಗ್‌ ವಿರುದ್ಧ ಹೂಡಲಾಗಿದ್ದ ಪೋಕ್ಸೊ ಪ್ರಕರಣವನ್ನು ದೆಹಲಿ ಪೊಲೀಸರು ರದ್ದುಗೊಳಿಸಿದ್ದರು.