ಕೆ ಕವಿತಾ ಮತ್ತು ಇಡಿ
ಕೆ ಕವಿತಾ ಮತ್ತು ಇಡಿ ಕೆ ಕವಿತಾ (ಫೇಸ್ಬುಕ್)
ಸುದ್ದಿಗಳು

ಅಬಕಾರಿ ನೀತಿ ಪ್ರಕರಣ: ಬಿಆರ್‌ಎಸ್‌ ನಾಯಕಿ ಕವಿತಾ ಅವರನ್ನು ಇ ಡಿ ವಶಕ್ಕೆ ನೀಡಿದ ದೆಹಲಿ ನ್ಯಾಯಾಲಯ

Bar & Bench

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಶಾಸಕಿ ಮತ್ತು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರನ್ನು ಒಂದು ವಾರ ಕಾಲ ಜಾರಿ ನಿರ್ದೇಶನಾಲಯದ (ಇ ಡಿ) ವಶಕ್ಕೆ ನೀಡಿ ದೆಹಲಿ ನ್ಯಾಯಾಲಯ ಶನಿವಾರ ಆದೇಶಿಸಿದೆ.

ಕವಿತಾ ಅವರು ಮಾರ್ಚ್ 23, 2024ರವರೆಗೆ ಇ ಡಿ ವಶದಲ್ಲಿರಬೇಕು ಎಂದು ರವೂಜ್‌ ಅವೆನ್ಯೂದ ವಿಶೇಷ ನ್ಯಾಯಾಧೀಶ (ಪಿಸಿ ಕಾಯ್ದೆ) ಎಂ ಕೆ ನಾಗಪಾಲ್‌ ಅವರು ನಿರ್ದೇಶನ ನೀಡಿದರು. ಇ ಡಿ ಹತ್ತು ದಿನಗಳ ಕಸ್ಟಡಿಗೆ ಕೋರಿತ್ತು.

ಮಾರ್ಚ್ 15 ರಂದು ಸಂಜೆ ಹೈದರಾಬಾದ್‌ನಲ್ಲಿ ಇ ಡಿ ತಂಡ ಕವಿತಾ ಅವರನ್ನು ವಿಚಾರಣೆ ನಡೆಸಿತ್ತು. ಅದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧಿಸಿತು.

ಕಳೆದ ವರ್ಷ ಮೂರು ಬಾರಿ ವಿಚಾರಣೆ ನಡೆಸಿದ್ದ ಇ ಡಿ ಈ ವರ್ಷ ಮತ್ತೆ ಸಮನ್ಸ್‌ ನೀಡಿತ್ತು. ಆದರೆ ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಅವರು ಸಮನ್ಸ್‌ಗೆ ಪ್ರತಿಕ್ರಿಯಿಸಿರಲಿಲ್ಲ.

ಜಾರಿ ನಿರ್ದೇಶನಾಲಯ ಹೊರಡಿಸಿರುವ ಸಮನ್ಸ್ ವಿರುದ್ಧ ಕವಿತಾ ಸಲ್ಲಿಸಿರುವ ಅರ್ಜಿ ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು ಮಂಗಳವಾರದಂದು (ಮಾರ್ಚ್ 19) ವಿಚಾರಣೆ ನಡೆಯುವ ಸಾಧ್ಯತೆಗಳಿವೆ.

ಕವಿತಾ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್ ಚೌಧರಿ , ನಿನ್ನೆ ಕವಿತಾ ಅವರ ಬಂಧನ ಅಧಿಕಾರದ ದುರುಪಯೋಗವಾಗಿದ್ದು, ಮಾರ್ಚ್ 19ರವರೆಗೆ ಅವರನ್ನು ಬಂಧಿಸದಂತೆ ನೀಡಿದ್ದ ತಡೆಯಾಜ್ಞೆಯನ್ನು ಉಲ್ಲಂಘಿಸಿದೆ. ಅವರನ್ನು ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ನೀಡಲಾಗಿದ್ದ ಭರವಸೆಗೆ ಇ ಡಿ ಬದ್ಧವಾಗಿರಬೇಕಿತ್ತು ಎಂದರು.

ಜಾರಿ ನಿರ್ದೇಶನಾಲಯದ ವಿಶೇಷ ವಕೀಲ ಜೊಹೆಬ್ ಹುಸೇನ್ ಅವರು ಈ ವಾದ ನಿರಾಕರಿಸಿದರು. ಈ ಹಂತದಲ್ಲಿ ನ್ಯಾಯಾಲಯ ಮಾರ್ಚ್ 19 ರಂದು ಸುಪ್ರೀಂ ಕೋರ್ಟ್ ಕವಿತಾ ಅವರ ಪ್ರಕರಣದ ವಿಚಾರಣೆ ನಡೆಸುತ್ತಿರುವಾಗ ಮಾರ್ಚ್ 15ರಂದು ಅವರನ್ನು ಬಂಧಿಸುವ ತುರ್ತು ಅಗತ್ಯವಿತ್ತೇ ಎಂದು ಪ್ರಶ್ನಿಸಿತು.

ಉನ್ನತ ನ್ಯಾಯಾಲಯದ ಆದೇಶಗಳಲ್ಲಿ ಇ ಡಿ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಯಾವುದೇ ಸ್ಪಷ್ಟ ಉಲ್ಲೇಖವಿಲ್ಲ ಎಂದು ಹುಸೇನ್‌ ತಿಳಿಸಿದರು. ಮದ್ಯ ನೀತಿ ಪ್ರಕರಣದಲ್ಲಿ ಕವಿತಾ ಅವರನ್ನು ಬಂಧಿಸಲು ಇರುವ ಕಾರಣಗಳ ಪಟ್ಟಿಯನ್ನು ಇ ಡಿ ಪರ ವಕೀಲರು ಹಸ್ತಾಂತರಿಸಿದರು. ಕವಿತಾ ಅವರನ್ನು ಬಂಧಿಸುವಲ್ಲಿ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಶೋಧಿಸುವಲ್ಲಿ ಎಲ್ಲಾ ನಿಯಮ ಪಾಲಿಸಲಾಗಿದೆ ಎಂದು ಅವರು ಸಮರ್ಥಿಸಿಕೊಂಡರು.

ಕುತೂಹಲಕಾರಿ ಸಂಗತಿಯೆಂದರೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕೌಲ್ ಅವರ ನಿವೃತ್ತಿಯು ಕವಿತಾ ವಿರುದ್ಧ ಜಾರಿ ನಿರ್ದೇಶನಾಲಯದ ಇತ್ತೀಚಿನ ಕ್ರಮಕ್ಕೆ ಕಾರಣವಾಗಿದೆಯೇ ಎಂಬ ಬಗ್ಗೆ ವಿಚಾರಣೆ ವೇಳೆ ಸಂಕ್ಷಿಪ್ತ ಚರ್ಚೆ ನಡೆಯಿತು. ನ್ಯಾ. ಕೌಲ್‌ ಅವರು ನಿವೃತ್ತರಾದ ದಿನ ಕವಿತಾ ಅವರಿಗೆ ಸಮನ್ಸ್‌ ನೀಡಲಾಗಿದೆ ಎಂದು ಚೌಧರಿ ವಾದಿಸಿದರು. ಆದರೆ ಈ ವಾದವನ್ನು ಹುಸೇನ್‌ ಬಲವಾಗಿ ಆಕ್ಷೇಪಿಸಿದರು.

ವಿಶೇಷವೆಂದರೆ, 2023ರ ಡಿಸೆಂಬರ್‌ನಲ್ಲಿ ನಿವೃತ್ತರಾಗುವ ನ್ಯಾ. ಕೌಲ್ ನೇತೃತ್ವದ ಪೀಠ ಕವಿತಾ ಸಲ್ಲಿಸಿದ ಮನವಿ ಮತ್ತು ಇ ಡಿ ವಿರುದ್ಧದ ಅರ್ಜಿಗಳನ್ನು ಆಲಿಸುತ್ತಿತ್ತು. ಪ್ರಕರಣ ಪ್ರಸ್ತುತ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌ ಅವರ ಮುಂದಿದೆ.