Patiala House court  
ಸುದ್ದಿಗಳು

ಮುಂಬೈ ದಾಳಿ ಸಂಚುಕೋರ ರಾಣಾ 18 ದಿನಗಳ ಕಾಲ ಎನ್ಐಎ ವಶಕ್ಕೆ

ಪಾಕಿಸ್ತಾನಿ ಮೂಲದ ಕೆನಡಿಯನ್-ಅಮೆರಿಕನ್ ಆದ ರಾಣಾನನ್ನು ಅಮೆರಿಕದಿಂದ ಗಡಿಪಾರು ಮಾಡಿದ್ದು, ಇಂದು ನಸುಕಿಗೂ ಮುನ್ನ ದೆಹಲಿಗೆ ಬಂದಿಳಿದ ನಂತರ ಬಂಧಿಸಲಾಯಿತು.

Bar & Bench

ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಮುಂಬೈ ದಾಳಿಯ ಪ್ರಮುಖ ಸಂಚಕೋರ, ಆರೋಪಿ ತಹವ್ವೂರ್ ಹುಸೇನ್ ರಾಣಾನನ್ನು 18 ದಿನಗಳ ಎನ್‌ಐಎ ಕಸ್ಟಡಿಗೆ ನೀಡಿದೆ.

ಎನ್‌ಐಎ 20 ದಿನಗಳ ಕಸ್ಟಡಿಗೆ ಒತ್ತಾಯಿಸಿದ ನಂತರ ವಿಶೇಷ ಎನ್‌ಐಎ ನ್ಯಾಯಾಧೀಶ ಚಂದರ್ ಜೀತ್ ಸಿಂಗ್ ಗುರುವಾರ ಮಧ್ಯರಾತ್ರಿಯ ನಂತರ ಆದೇಶ ಹೊರಡಿಸಿದರು.

ಪಾಕಿಸ್ತಾನಿ ಮೂಲದ ಕೆನಡಿಯನ್-ಅಮೆರಿಕನ್ ರಾಣಾನನ್ನು ಅಮೆರಿಕದಿಂದ ಗಡಿಪಾರು ಮಾಡಿದ್ದು, ಇಂದು ನಸುಕಿಗೂ ಮುನ್ನ ದೆಹಲಿಗೆ ಬಂದಿಳಿದ ನಂತರ ಬಂಧಿಸಲಾಯಿತು.

ರಾಣಾ 1961ರಲ್ಲಿ ಪಾಕಿಸ್ತಾನದಲ್ಲಿ ಜನಿಸಿದ್ದು, 1990ರ ದಶಕದಲ್ಲಿ ಕೆನಡಾಕ್ಕೆ ವಲಸೆ ಹೋಗಿ, 2000ದ ದಶಕದ ಆರಂಭದಲ್ಲಿ ಅಲ್ಲಿನ ಪೌರತ್ವ ಪಡೆದಿದ್ದ. ಇದಕ್ಕೂ ಮೊದಲು ಪಾಕಿಸ್ತಾನಿ ಸೈನ್ಯದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಿದ್ದ.

ರಾಣಾನನ್ನು 2008ರ ಮುಂಬೈ ದಾಳಿ ನಡೆಸಲು ಅನುಕೂಲವಾಗುವಂತೆ ವಿಚಕ್ಷಣ ಕಾರ್ಯಾಚರಣೆಗಳನ್ನು ನಡೆಸಿದ್ದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯ ಆಪ್ತ ಸಹಾಯಕ ಎಂದು ನಂಬಲಾಗಿದೆ. ಹೆಡ್ಲಿ ಪ್ರಸ್ತುತ ಅಮೆರಿಕದ ಜೈಲಿನಲ್ಲಿದ್ದಾನೆ.

ಮುಂಬೈ ದಾಳಿಕೋರರಿಗೆ ಅನುಕೂಲ ಮಾಡಿಕೊಡಲು ಓಡಾಟದ ಸವಲತ್ತು ಕಲ್ಪಿಸುವುದು, ಆರ್ಥಿಕ ಬೆಂಬಲ ನೀಡುವುದನ್ನು ರಾಣಾ ಮಾಡಿದ್ದ. ರಾಣಾ ಪಾಕಿಸ್ತಾನದ ಗುಪ್ತಚರ ಸೇವೆ, ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ), ಪಾಕಿಸ್ತಾನಿ ಸೇನೆ ಮತ್ತು ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ಪ್ರಮುಖ ಸಂಘಟನೆಯಾದ ಲಷ್ಕರ್-ಎ-ತೈಬಾ (ಎಲ್ಇಟಿ) ಜೊತೆ ಸಂಪರ್ಕ ಹೊಂದಿದ್ದ ಎಂದು ಭಾರತೀಯ ಗುಪ್ತರ ಹಾಗೂ ತನಿಖಾ ಸಂಸ್ಥೆಗಳು ತಿಳಿಸಿದ್ದವು.

ರಾಣಾ ಕಸ್ಟಡಿ ವಿಚಾರವಾಗಿ ಹಿರಿಯ ವಕೀಲ ದಯಾನ್ ಕೃಷ್ಣನ್ ಎನ್ಐಎ ಪರವಾಗಿ ವಾದಿಸಿದರು.