ಸಾಕೇತ್ ನ್ಯಾಯಾಲಯ
ಸಾಕೇತ್ ನ್ಯಾಯಾಲಯ 
ಸುದ್ದಿಗಳು

ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಕೊಲೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯ

Bar & Bench

ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರನ್ನು 2008ರಲ್ಲಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಶನಿವಾರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಅಜಯ್ ಕುಮಾರ್ ಮತ್ತು ಬಲ್ಜೀತ್ ಮಲಿಕ್ ಅವರಿಗೆ ಸಾಕೇತ್ ನ್ಯಾಯಾಲಯ ಸಂಕೀರ್ಣದಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರವೀಂದರ್ ಕುಮಾರ್ ಪಾಂಡೆ ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಇನ್ನೊಬ್ಬ ಅಪರಾಧಿ ಅಜಯ್ ಸೇಥಿಗೆ ಮೂರು ವರ್ಷಗಳ ಸಾದಾ ಜೈಲು ಸಜೆ ವಿಧಿಸಲಾಗಿದೆ.

ಕಪೂರ್, ಶುಕ್ಲಾ, ಕುಮಾರ್ ಹಾಗೂ ಮಲಿಕ್ ಅವರನ್ನು ಸೌಮ್ಯಾ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯ ಅಕ್ಟೋಬರ್ 18ರಂದು ಘೋಷಿಸಿತ್ತು. ಕೃತ್ಯದಲ್ಲಿ ಅವರ ಪಾತ್ರ ಸಂಶಯಾತೀತವಾಗಿ ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶದೊಂದಿಗೆ ಮಾಡಿದ ಅಪರಾಧ) ಅಡಿಯಲ್ಲಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗಿತ್ತು.

ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯ (ಎಂಸಿಒಸಿಎ) ಸೆಕ್ಷನ್ 3 (1) (ಐ) ಅಡಿಯಲ್ಲಿ ಈ ನಾಲ್ವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿತ್ತು.

ಏತನ್ಮಧ್ಯೆ, ಸೇಥಿ ಅವರನ್ನು ಐಪಿಸಿಯ ಸೆಕ್ಷನ್ 411 (ಕದ್ದ ಆಸ್ತಿಯನ್ನು ಅಪ್ರಾಮಾಣಿಕವಾಗಿ ಸ್ವೀಕರಿಸುವುದು) ಮತ್ತು ಎಂಸಿಒಸಿಎ ಕಾಯಿದೆಯ ಸೆಕ್ಷನ್ 3 (2) ಮತ್ತು 3 (5) ಅಡಿಯ ಅಪರಾಧಗಳಿಗೆ ಶಿಕ್ಷೆ ವಿಧಿಸಲಾಗಿದೆ.

ಇಂಡಿಯಾ ಟುಡೇ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸೌಮ್ಯ ಅವರು ಸೆಪ್ಟೆಂಬರ್ 2008ರಲ್ಲಿ ವಸಂತ್ ಕುಂಜ್ ಪ್ರದೇಶದ ಬಳಿ ತಮ್ಮ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ತಲೆಗೆ ಗುಂಡು ತಗುಲಿದ ಕಾರಣ ಆಕೆ ಮೃತಪಟ್ಟಿದ್ದಾರೆ ಎಂದು ವಿಧಿವಿಜ್ಞಾನ ವರದಿಗಳು ತಿಳಿಸಿದ್ದವು. ಪೊಲೀಸರ ಪ್ರಕಾರ, ಸೌಮ್ಯ ಅವರು ಕಚೇರಿಯಿಂದ ತಡರಾತ್ರಿ ಮನೆಗೆ ಹಿಂದಿರುಗುತ್ತಿದ್ದಾಗ ಅವಳನ್ನು ಬೆನ್ನಟ್ಟಿ ಗುಂಡು ಹಾರಿಸಲಾಗಿತ್ತು.

2009ರ ಮಾರ್ಚ್‌ನಲ್ಲಿ ಮತ್ತೊಂದು ಪ್ರಕರಣದಲ್ಲಿ ಭಾಗಿಯಾಗಿದ್ದದವಿ ಕಪೂರ್ ಮತ್ತು ಅಮಿತ್ ಶುಕ್ಲಾ ಅವರನ್ನು ಪೊಲೀಸರು ಬಂಧಿಸಿದ್ದರು. ಆಗ ನೀಡಿದ ಹೇಳಿಕೆಯಲ್ಲಿ ಅವರು ಸೌಮ್ಯ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದರು.

2010ರ ಜೂನ್ ನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಲಯವು 2016 ರ ಜನವರಿ 19 ರಂದು ಪ್ರಕರಣದ ವಾದಗಳನ್ನು ಆಲಿಸಿತಾದರೂ, ತೀರ್ಪು ಘೋಷಿಸುವ ಮೊದಲು ಹಲವಾರು ಬಾರಿ ಪ್ರಕರಣ ಮುಂದೂಡಿತ್ತು.