Yes Bank and Rana Kapoor 
ಸುದ್ದಿಗಳು

ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಕುರಿತಾದ ಪುಸ್ತಕ ಮಾರಾಟ ಮತ್ತು ಪ್ರಸರಣಕ್ಕೆ ದೆಹಲಿ ನ್ಯಾಯಾಲಯ ತಡೆ

ʼಯೆಸ್ ಮ್ಯಾನ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ರಾಣಾ ಕಪೂರ್ʼ ಪುಸ್ತಕವನ್ನು ಡಿಸೆಂಬರ್ 2020ರಲ್ಲಿ ಪ್ರಕಟಿಸಲಾಗಿತ್ತು. ಇದನ್ನು ಪತ್ರಕರ್ತ ಪವನ್ ಸಿ ಲಾಲ್ ಬರೆದಿದ್ದು ಹಾರ್ಪರ್ಕಾಲಿನ್ಸ್ ಪ್ರಕಾಶನ ಹೊರತಂದಿದೆ.

Bar & Bench

ಯೆಸ್‌ ಬ್ಯಾಂಕ್‌ ಸಂಸ್ಥಾಪಕ ಮತ್ತು ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಣಾ ಕಪೂರ್‌ ಅವರ ಕುರಿತಂತೆ ಪತ್ರಕರ್ತರೊಬ್ಬರು ಪ್ರಕಟಿಸಿದ್ದ ಪುಸ್ತಕದ ಮಾರಾಟ ಮತ್ತು ಪ್ರಸರಣಕ್ಕೆ ದೆಹಲಿ ನ್ಯಾಯಾಲಯ ತಡೆ ನೀಡಿದೆ [ರಾಣಾ ಕಪೂರ್‌ ಮತ್ತು ಹಾರ್ಪರ್‌ ಕಾಲಿನ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಇನ್ನಿತರರ ನಡುವಣ ಪ್ರಕರಣ].

ʼಯೆಸ್ ಮ್ಯಾನ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ರಾಣಾ ಕಪೂರ್ʼ ಪುಸ್ತಕವನ್ನು ಡಿಸೆಂಬರ್ 2020ರಲ್ಲಿ ಪ್ರಕಟಿಸಲಾಗಿತ್ತು. ಇದನ್ನು ಪತ್ರಕರ್ತ ಪವನ್ ಸಿ ಲಾಲ್ ಬರೆದಿದ್ದು ಹಾರ್ಪರ್‌ ಕಾಲಿನ್ಸ್ ಪ್ರಕಾಶನ ಪ್ರಕಟಿಸಿದೆ. ಗ್ರಂಥ ಡಿಸೆಂಬರ್ 2020ರಲ್ಲಿ ಬಿಡುಗಡೆಯಾಗಿತ್ತು.

ಪುಸ್ತಕ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ ಮತ್ತು ಸಂಪೂರ್ಣ ನೈಜ ಘಟನೆಗಳನ್ನು ಆಧರಿಸಿದೆ ಎಂದು ಕಪೂರ್‌ ಮೇಲ್ನೋಟಕ್ಕೆ ಸಾಬೀತುಪಡಿಸಿದ್ದಾರೆ ಎಂದು ಜುಲೈ 10 ರಂದು ನೀಡಿದ ಮಧ್ಯಂತರ ಆದೇಶದಲ್ಲಿ, ತೀಸ್ ಹಜಾರಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ನರೇಶ್ ಕುಮಾರ್ ಲಕಾ ಅವರು ತಿಳಿಸಿದ್ದಾರೆ.

ಪ್ರಕಾಶಕರು ಮತ್ತು ಲೇಖಕರ ವಿರುದ್ಧ ಕಪೂರ್ ಹೂಡಿರುವ ಮಾನನಷ್ಟ ಪ್ರಕರಣದ ತೀರ್ಪು ಬರುವವರೆಗೆ ನ್ಯಾಯಾಲಯದ ಈ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ.  

ಪುಸ್ತಕದಿಂದಾಗಿ ರಾಣಾ ಕಪೂರ್‌ ಅವರ ಮಾನಹಾನಿಯಾಗುತ್ತದೆ ಅದನ್ನು ಹಿಂತಿರುಗಿಸಲಾಗದು. ಆದರೆ ಪ್ರತಿವಾದಿಗೆ ವಿತ್ತೀಯ ನಷ್ಟ ಮಾತ್ರ ಉಂಟಾಗುತ್ತದೆ. ಅದು ರಾಣಾ ಅವರ ಖ್ಯಾತಿಗಿಂತಲೂ ಹೆಚ್ಚಲ್ಲ. ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಖ್ಯಾತಿಯನ್ನು ರೂಪಿಸಲು ಅನೇಕ ವರ್ಷಗಳು ಬೇಕು ಆದರೆ ಹಾಳುಗೆಡವಲು ಕೆಲ ನಿಮಿಷಗಳು ಸಾಕು. ಹೀಗಾಗಿ ಹಾರ್ಪರ್‌ ಕಾಲಿನ್ಸ್‌ ಮತ್ತು ಕೃತಿಕಾರ ಲಾಲ್‌ ಅವರು ಪುಸ್ತಕವನ್ನು ಯಾವುದೇ ರೀತಿಯಲ್ಲಿ ಮಾರಾಟ ಮಾಡಬಾರದು, ವಿತರಿಸಬಾರದು ಇಲ್ಲವೇ ಪ್ರಸಾರ ಮಾಡಬಾರದು ಎಂದು ನಿರ್ಬಂಧ ವಿಧಿಸಲಾಗಿದೆ.

ಅಲ್ಲದೆ ʼದಿ ಪ್ರಿಂಟ್‌ʼ ಸುದ್ದಿ ಜಾಲತಾಣದಲ್ಲಿ ಪ್ರಕಟವಾಗಿರುವ ರಾಣಾ ಅವರ ಕುರಿತ ಎರಡು ಲೇಖನಗಳನ್ನು ತೆಗೆದುಹಾಕುವಂತೆಯೂ ನ್ಯಾಯಾಲಯ ಆದೇಶಿಸಿದೆ. ಇದೇ ವೇಳೆ ರಾಣಾ ಅವರ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ನೀಡದಂತೆ ಪ್ರತಿವಾದಿಗಳನ್ನು ನಿರ್ಬಂಧಿಸಲಾಗಿದೆ.