AAP leaders Satyendar Jain, Atishi, Raghav Chadha and Sourabh Bharadwaj with Rouse Avenue Court
ಉತ್ತರ ದೆಹಲಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿರುವ ಬಿಜೆಪಿ ನಾಯಕ ಚೈಲ್ ಬಿಹಾರಿ ಗೋಸ್ವಾಮಿ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಾದ ಸತ್ಯೇಂದ್ರ ಜೈನ್, ಅತಿಶಿ ಮರ್ಲೆನಾ, ರಾಘವ್ ಚಡ್ಡಾ, ಸೌರಭ್ ಭಾರದ್ವಾಜ್ ಹಾಗೂ ದುರ್ಗೇಶ್ ಪಾಠಕ್ ಅವರಿಗೆ ಸಂಸದರು ಮತ್ತು ಶಾಸಕರ ಪ್ರಕರಣಗಳ ವಿಚಾರಣೆ ನಡೆಸುವ ದೆಹಲಿ ನ್ಯಾಯಾಲಯವೊಂದು ಸಮನ್ಸ್ ನೀಡಿದೆ [ಛೈಲ್ ಬಿಹಾರಿ ಗೋಸ್ವಾಮಿ ಮತ್ತು ಸತ್ಯೇಂದ್ರ ಜೈನ್ ಇನ್ನಿತರರ ನಡುವಣ ಪ್ರಕರಣ].
ಎಲ್ಲಾ ಆರೋಪಿಗಳು ಮಾರ್ಚ್ 14, 2022 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಅವರು ಸೂಚಿಸಿದ್ದಾರೆ.
ಆರೋಪಿಗಳಾದ ಸತ್ಯೇಂದ್ರ ಜೈನ್, ಅತಿಶಿ ಮರ್ಲೆನಾ, ರಾಘವ್ ಚಡ್ಡಾ, ದುರ್ಗೇಶ್ ಪಾಠಕ್ ಮತ್ತು ಸೌರಭ್ ಭಾರದ್ವಾಜ್ ಅವರು ಐಪಿಸಿ ಸೆಕ್ಷನ್ 499/500 (ಮಾನನಷ್ಟ) ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.
ತಮ್ಮ ವಿರುದ್ಧ ಮಾಡಲಾಗಿರುವ ಮಾನಹಾನಿಕರ ಟೀಕೆ ಅಪ್ರಮಾಣಿಕ ಉದ್ದೇಶದಿಂದ ಕೂಡಿದ್ದು ಸಾಮಾನ್ಯರ ದೃಷ್ಟಿಯಲ್ಲಿ ತಮ್ಮ ನೈತಿಕ ಮತ್ತು ಬೌದ್ಧಿಕ ವ್ಯಕ್ತಿತ್ವವನ್ನು ಸಂಕುಚಿತಗೊಳಿಸುವ ಯತ್ನ ನಡೆದಿದೆ ಎಂದು ಗೋಸ್ವಾಮಿ ಆರೋಪಿಸಿದ್ದಾರೆ. ಪ್ರತಿಯೊಬ್ಬ ಆರೋಪಿಯ ಮೇಲೂ ಅವರು ಪ್ರತ್ಯೇಕ ಆರೋಪ ಮಾಡಿದ್ದಾರೆ. ಉತ್ತರ ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಸರಿನಲ್ಲಿ ರೂ.1400 ಕೋಟಿ ಹಣವನ್ನು ಅಕ್ರಮವಾಗಿ ಸಂಗ್ರಹಿಸಿರುವ ಬಿಜೆಪಿಯ ಪಾಲಿಕೆ ಸದಸ್ಯರು ಅದನ್ನು ತಮ್ಮ ನಡುವೆಯೇ ಹಂಚಿಕೊಂಡಿದ್ದಾರೆ ಎನ್ನುವುದು ಆಪ್ ಶಾಸಕರು ಆರೋಪವಾಗಿತ್ತು.