Rahul Gandhi, Sonia Gandhi and National Herald 
ಸುದ್ದಿಗಳು

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಜುಲೈ 2ರಿಂದ 8ರವರೆಗೆ ವಿಚಾರಣೆ ನಡೆಸಲಿರುವ ದೆಹಲಿ ನ್ಯಾಯಾಲಯ

ಇಂದು ಜಾರಿ ನಿರ್ದೇಶನಾಲಯ ಆರಂಭಿಕ ವಾದ ಮಂಡಿಸಿದ ನಂತರ, ನ್ಯಾಯಾಲಯ ಮಾಲೀಕತ್ವ ಮತ್ತು ಷೇರುದಾರರ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿತು.

Bar & Bench

ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮತ್ತಿತರರ ವಿರುದ್ಧದ ವಿಚಾರಣೆಯನ್ನು ಜುಲೈ 2ರಿಂದ 8ರವರೆಗೆ ಪ್ರತಿದಿನ ನಡೆಸುವುದಾಗಿ ದೆಹಲಿ ನ್ಯಾಯಾಲಯ ಬುಧವಾರ ತಿಳಿಸಿದೆ.

ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ಈ ಮಾಹಿತಿ ನೀಡಿದರು.

ರಾಹುಲ್‌ ಮತ್ತು ಸೋನಿಯಾ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ , ಬೃಹತ್ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಲು ಹೆಚ್ಚಿನ ಸಮಯಾವಕಾಶ ಕೋರಿದರು. ಅವರು ವಿಷಯವನ್ನು ಜುಲೈಗೆ ಮುಂದೂಡಬೇಕೆಂದು ಕೇಳಿದರು.

ಆದರೂ, ನ್ಯಾಯಾಲಯ  ಇಂದು ಜಾರಿ ನಿರ್ದೇಶನಾಲಯ (ED) ತನ್ನ ಆರಂಭಿಕ ವಾದ ಮಂಡಿಸಲು ಅವಕಾಶ ನೀಡಿತು. ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್  ಎಸ್‌ ವಿ ರಾಜು ಮತ್ತು ವಕೀಲ ಜೊಹೆಬ್ ಹೊಸೇನ್ ಅವರು ಪ್ರಕರಣದ ಅಪರಾಧದ ಗಳಿಕೆಯನ್ನು ಸಾಬೀತುಪಡಿಸಲು ಯತ್ನಿಸಿದರು.

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಒಡೆತನ ಹೊಂದಿದ್ದ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ಗೆ (ಎಜೆಎಲ್‌) ಕಾಂಗ್ರೆಸ್‌ ಪಕ್ಷ ₹ 90 ಕೋಟಿಯಷ್ಟು ಸಾಲ ನೀಡಿತ್ತು. ಯಂಗ್‌ ಇಂಡಿಯಾ ಸಂಸ್ಥೆ ಕಾಂಗ್ರೆಸ್‌ಗೆ ಕೇವಲ ₹ 50 ಲಕ್ಷ ಹಣ ನೀಡಿ ಎಜೆಎಲ್‌ ಕಾಂಗ್ರೆಸ್‌ಗೆ ನೀಡಬೇಕಿದ್ದ ₹ 90 ಕೋಟಿಯಷ್ಟು ಹಣ ಹಿಂಪಡೆಯಬೇಕಾದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು ಎಂಬುದು ಹಗರಣದ ಸಾರ. ಈಕ್ವಿಟಿ ವಹಿವಾಟಿನಲ್ಲಿ ₹ 2,000 ಕೋಟಿಗೂ ಅಧಿಕ ಆಸ್ತಿ ಅವ್ಯವಹಾರ ನಡೆದಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಸೋನಿಯಾ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಗಾಂಧಿ ಕುಟುಂಬದ ನಿಯಂತ್ರಣದಲ್ಲಿರುವ - ಯಂಗ್ ಇಂಡಿಯನ್ ಲಿಮಿಟೆಡ್‌ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಖಾಸಗಿ ದೂರು ದಾಖಲಿಸಿ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ಆಸ್ತಿ ದುರುಪಯೋಗದ ಆರೋಪ ಮಾಡಿದ್ದರು.

ಕಳೆದ ಏಪ್ರಿಲ್ 15 ರಂದು ಗಾಂಧಿ ಕುಟುಂಬ, ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹಾಗೂ ಇತರರ ವಿರುದ್ಧ ಇ ಡಿ ಪ್ರಾಸಿಕ್ಯೂಷನ್ ದೂರು ದಾಖಲಿಸಿತ್ತು.