Enforcement Directorate Delhi 
ಸುದ್ದಿಗಳು

ದೆಹಲಿ ಅಬಕಾರಿ ನೀತಿ ಹಗರಣ: ₹5 ಕೋಟಿ ಲಂಚ ಪಡೆದ ಆರೋಪದಡಿ ಇ ಡಿ ಸಹಾಯಕ ನಿರ್ದೇಶಕ, ಗುಮಾಸ್ತನನ್ನು ಬಂಧಿಸಿದ ಸಿಬಿಐ

Bar & Bench

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸಿಲುಕದಂತೆ ನೋಡಿಕೊಳ್ಳಲು ಉದ್ಯಮಿ ಅಮನದೀಪ್ ಧಲ್‌ ಅವರಿಗೆ ₹5 ಕೋಟಿ ಬೇಡಿಕೆ ಇಟ್ಟ ಆರೋಪದಡಿ ಜಾರಿ ನಿರ್ದೇಶನಾಲಯದ (ಇಡಿ) ಸಹಾಯಕ ನಿರ್ದೇಶಕ ಪವನ್ ಖತ್ರಿ ಎಂಬಾತನನ್ನು ಸಿಬಿಐ ಬಂಧಿಸಿದೆ.

ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿರುವಂತೆ ಧಲ್ ಅವರ ತಂದೆ ಬಿರೇಂದರ್ ಪಾಲ್ ಸಿಂಗ್, ದೀಪಕ್ ಸಾಂಗ್ವಾನ್ (ಏರ್ ಇಂಡಿಯಾ ಸಹಾಯಕ ಜನರಲ್ ಮ್ಯಾನೇಜರ್), ವಿಕ್ರಮಾದಿತ್ಯ (ಕ್ಲಾರಿಡ್ಜ್ ಹೋಟೆಲ್ಸ್ ಮತ್ತು ರೆಸಾರ್ಟ್‌ಗಳ ಸಿಇಒ), ಪ್ರವೀಣ್ ಕುಮಾರ್ ವತ್ಸ್‌ (ಚಾರ್ಟರ್ಡ್ ಅಕೌಂಟೆಂಟ್) ಹಾಗೂ ನಿತೇಶ್ ಕೋಹರ್ (ಜಾರಿ ನಿರ್ದೇಶನಾಲಯದ ಗುಮಾಸ್ತ) ಹೆಸರುಗಳನ್ನೂ ಎಫ್‌ಐಆರ್‌ನಲ್ಲಿ ಸಿಬಿಐನಲ್ಲಿ ಉಲ್ಲೇಖಿಸಿದೆ.

ಆರೋಪಿಗಳಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದ್ದು ರೂ 2.19 ಕೋಟಿ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಆರೋಪಿಯಾಗಿರುವ ತನ್ನ ಮಗನಿಗೆ ತನಿಖೆಯಲ್ಲಿ ಸಹಾಯ ಮಾಡಲು ಧಲ್‌ ತಂದೆ ₹50 ಲಕ್ಷದಂತೆ ಕಂತುಗಳಲ್ಲಿ ವತ್ಸ್‌ಗೆ ₹5 ಕೋಟಿ ಲಂಚ ನೀಡಿದ್ದಾರೆ ಎಂದು ಆರೋಪಿಸಿ ಇ ಡಿ ನೀಡಿದ್ದ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ.

ಬಂಧಿತ ಇ ಡಿ ಅಧಿಕಾರಿಗಳು ಅಬಕಾರಿ ನೀತಿ ಪ್ರಕರಣದ ತನಿಖೆಯ ಭಾಗವಾಗಿರದಿದ್ದರೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.  

ಐಪಿಸಿ ಸೆಕ್ಷನ್‌ 120 ಬಿ (ಅಪರಾಧದ ಪಿತೂರಿ) ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಅಧಿಕಾರಿ ಹಾಗೂ ನೌಕರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಳೆದ ವರ್ಷದಿಂದ ಸಿಬಿಐ ಮತ್ತು ಇ ಡಿ ಅಬಕಾರಿ ನೀತಿ ಪ್ರಕರಣದ ತನಿಖೆ ನಡೆಸುತ್ತಿವೆ. ಮಹತ್ವದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಯಿತು. ಅವರು ಇನ್ನೂ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್‌ ನಿರಾಕರಿಸಿದೆ.