Kavitha Kalvakuntla, Supreme Court
Kavitha Kalvakuntla, Supreme Court 
ಸುದ್ದಿಗಳು

ಅಬಕಾರಿ ಹಗರಣದ ಆರೋಪಿ, ಬಿಆರ್‌ಎಸ್‌ ನಾಯಕಿ ಕವಿತಾಗೆ ಮಧ್ಯಂತರ ಪರಿಹಾರ ನೀಡದ ಸುಪ್ರೀಂ: ಮೂರು ವಾರಗಳ ಬಳಿಕ ವಿಚಾರಣೆ

Bar & Bench

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತಮಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್‌ ಪ್ರಶ್ನಿಸಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಕವಿತಾ ಅವರಿಗೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಪ್ರಕರಣವನ್ನು 3 ವಾರಗಳ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿತು.

ಕವಿತಾ ಅವರು ವಿಧಾನಪರಿಷತ್ ಸದಸ್ಯೆಯಾಗಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಸಮನ್ಸ್ ಜಾರಿ ಮಾಡಿದೆ.ಎರಡು ವಾರಗಳ ಹಿಂದೆ ಸಮನ್ಸ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೂಸುಪ್ರೀಂ ಕೋರ್ಟ್‌ ಪ್ರಕರಣದ ತುರ್ತು ವಿಚಾರಣೆಗೆ ಸಮ್ಮತಿ ಸೂಚಿಸಿರಲಿಲ್ಲ. ಪರಿಣಾಮ ಕವಿತಾ ಮೂರು ಬಾರಿ ಇ ಡಿ ಎದುರು ವಿಚಾರಣೆಗೆ ಹಾಜರಾಗಿದ್ದರು.

ಸೋಮವಾರದ ವಿಚಾರಣೆ ವೇಳೆ ಕವಿತಾ ಅವರ ಅರ್ಜಿ ನಿರುಪಯುಕ್ತವಾದುದು ಎಂದು ಇ ಡಿ ಪರ ವಕೀಲರು ವಾದಿಸಿದರು. ಕವಿತಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ವಿಚಾರಣೆ ನಡೆಸುವ ಸ್ಥಳ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದರು.

“ಆಕೆಯನ್ನು ಮನೆಯಲ್ಲಿಯೇ ಅಥವಾ ದೆಹಲಿಯಲ್ಲಿಯೇ ವಿಚಾರಣೆ ನಡೆಸಬೇಕಿದ್ದರೂ ಪ್ರಕರಣ ನ್ಯಾಯಾಲಯದಲ್ಲಿದ್ದು ನಳಿನಿ ಚಿದಂಬರಂ ಮತ್ತು ಅಭಿಷೇಕ್‌ ಬ್ಯಾನರ್ಜಿ ಅವರು ಸಲ್ಲಿಸಿರುವ ಇದೇ ರೀತಿಯ ಅರ್ಜಿಗಳಲ್ಲಿ ನೋಟಿಸ್‌ ನೀಡಲಾಗಿದೆ” ಎಂದರು.

ಕವಿತಾ ಅವರ ಮನವಿಯನ್ನು ಬೇರೆ ಪ್ರಕರಣಗಳೊಂದಿಗೆ ಲಗತ್ತಿಸುವುದಕ್ಕೆ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ವಿರೋಧ ವ್ಯಕ್ತಪಡಿಸಿದರು. ವಾದ ಆಲಿಸಿದ ನ್ಯಾಯಾಲಯ ಅಂತಿಮವಾಗಿ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಿತು.