ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ವ್ಯಾಪಾರದಲ್ಲಿ ಏಕಸ್ವಾಮ್ಯ ಮತ್ತು ಹತೋಟಿ ಸಾಧಿಸಲು ದಕ್ಷಿಣ ಭಾರತದ ಆರೋಪಿಗಳ ಜೊತೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳವು (ಸಿಬಿಐ) ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದು, ಅವರ ಜಾಮೀನಿಗೆ ವಿರೋಧ ದಾಖಲಿಸಿದೆ.
ಹಿಂದಿನ ಅಬಕಾರಿ ನೀತಿಯ ಬಗ್ಗೆ ಸಿಸೋಡಿಯಾ ಅವರು ಸಾರ್ವಜನಿಕ ಅಭಿಪ್ರಾಯವನ್ನು ತಿರುಚಿದ್ದಾರೆ ಎಂದು ಸಿಬಿಐ ತನ್ನ ಆಕ್ಷೇಪಣೆಯಲ್ಲಿ ವಿವರಿಸಿದೆ. “ದೆಹಲಿಯಲ್ಲಿ ಸಗಟು ಮತ್ತು ಚಿಲ್ಲರೆ ಮದ್ಯ ವ್ಯಾಪಾರದಲ್ಲಿ ಏಕಸ್ವಾಮ್ಯ ಮತ್ತು ನಿಯಂತ್ರಣ ಹೊಂದಲು ದಕ್ಷಿಣ ಭಾರತದ ಆರೋಪಿಗಳು ಮತ್ತು ಇತರರ ಜೊತೆಗೂಡಿ ಪೂರ್ವ ನಿರ್ಧರಿತ ಯೋಜನೆಯ ಮೂಲಕ ಅಬಕಾರಿ ನೀತಿಯನ್ನು ತಿರುಚುವ ಕ್ರಿಮಿನಲ್ ಪಿತೂರಿ ಕೃತ್ಯದಲ್ಲಿ ಅರ್ಜಿದಾರರು ಭಾಗಿಯಾಗಿದ್ದಾರೆ” ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ಸಿಸೋಡಿಯಾ ಅವರ ಪತ್ನಿಯ ಅನಾರೋಗ್ಯದ ಆಧಾರದಲ್ಲಿ ತಾತ್ಕಾಲಿಕ ಮಧ್ಯಂತರ ವೈದ್ಯಕೀಯ ಜಾಮೀನು ಕೋರುವುದು ಹೊಸದೇನಲ್ಲ. ಸಿಸೋಡಿಯಾ ಅವರ ಪತ್ನಿ 23 ವರ್ಷಗಳಿಂದ ಚಿಕಿತ್ಸೆಯಲ್ಲಿದ್ದಾರೆ ಎಂದು ಸಿಬಿಐ ವಾದಿಸಿದೆ.
“ಈ ದಾಖಲೆಗಳಿಂದ ತಿಳಿಯುವುದೇನೆಂದರೆ ಅರ್ಜಿದಾರರ ಪತಿಯ ಸ್ಥಿತಿಯು ಗಂಭೀರವಾಗಿಲ್ಲ. ಈ ನೆಲೆಯಲ್ಲಿ ಪತ್ನಿಯನ್ನು ನೋಡಿಕೊಳ್ಳಲು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಅಗತ್ಯವಿಲ್ಲ. ಪತ್ನಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿರುವುದಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಸಿಸೋಡಿಯಾ ಬಚ್ಚಿಟ್ಟಿದ್ದಾರೆ ಎಂದು ತಿಳಿಸಿದ ನಂತರ ಅರ್ಜಿದಾರರು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ವೈದ್ಯಕೀಯ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾರೆ” ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಸಿಸೋಡಿಯಾ ಅವರು ರಾಜಕೀಯವಾಗಿ ಪ್ರಭಾವಿಯಾಗಿದ್ದು, ಅವರು ಈಗಾಗಲೇ ಸಾಕ್ಷಿಗಳನ್ನು ನಾಶಪಡಿಸಿದ್ದಾರೆ. ವಿಚಾರಣೆಯ ವೇಳೆ ಅವರು ಸಹಕಾರ ನೀಡಿಲ್ಲ ಎಂದು ಆಕ್ಷೇಪಿಸಲಾಗಿದೆ.
ಕಳೆದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬೆಲಾ ಎಂ ತ್ರಿವೇದಿ ಮತ್ತು ಉಜ್ಜಲ್ ಭುಯಾನ್ ಅವರ ನೇತೃತ್ವದ ತ್ರಿಸದಸ್ಯ ಪೀಠವು ಸಿಸೋಡಿಯಾ ಅವರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿತ್ತು.