ಸರ್ಕಾರಿ ಶಾಲಾ ಶಿಕ್ಷಕರು ಭವಿಷ್ಯದಲ್ಲಿ ವಿದೇಶಿ ತರಬೇತಿ ಪಡೆಯುವುದನ್ನು ನಿಷೇಧಿಸುವ ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ವಿ ಕೆ ಸಕ್ಸೇನಾ ಅವರ ನಿರ್ಧಾರವನ್ನು ಪ್ರಶ್ನಿಸಿ ದೆಹಲಿಯ ಎಎಪಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದೆದುರು ಅರ್ಜಿಯನ್ನು ಪ್ರಸ್ತಾಪಿಸಿದ್ದು ಏಪ್ರಿಲ್ 14, 2023ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ವಿದೇಶಗಳಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ತರಬೇತಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್‌ನಿಂದ ಲೆ. ಗವರ್ನರ್ ಮತ್ತು ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಿದೆ.
ತನ್ನ ಪ್ರಸ್ತಾವನೆಗೆ ಉತ್ತರಿಸಿದ ಲೆ. ಗವರ್ನರ್ ಅವರು ಶಿಕ್ಷಕರನ್ನು ತರಬೇತಿಗೆ ಕಳಿಸುವ ಪ್ರಕ್ರಿಯೆಗೆ ತಡೆ ನೀಡುತ್ತಿದ್ದಾರೆ ಎಂದು ದೆಹಲಿ ಸರ್ಕಾರ ಆರೋಪಿಸಿದೆ.
ಸುಮಾರು 30 ಶಿಕ್ಷಕರನ್ನು ತರಬೇತಿಗಾಗಿ ಫಿನ್‌ಲ್ಯಾಂಡ್‌ಗೆ ಕಳುಹಿಸುವ ಸರ್ಕಾರದ ಪ್ರಸ್ತಾವನೆಯನ್ನು ದೀರ್ಘ ಕಾಲ ಬಾಕಿ ಉಳಿಸಿಕೊಂಡಿರುವ ಗವರ್ನರ್ ಅವರು ಶೀಘ್ರ ಅದನ್ನು ಅನುಮೋದಿಸಬೇಕೆಂದು ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಎಪಿಯ ಸಚಿವರು, ಶಾಸಕರು ಹಾಗೂ ಕಾರ್ಯಕರ್ತರೊಂದಿಗೆ ಲೆ. ಗವರ್ನರ್ ಅಧಿಕೃತ ನಿವಾಸದೆದುರು ಪ್ರತಿಭಟನೆ ನಡೆಸಿದ್ದರು.
ದೆಹಲಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯುಕ್ತಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ನಿಯಂತ್ರಣ ಸಾಧಿಸುವ ಕುರಿತು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವಿನ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ,ಕೇಜ್ರಿವಾಲ್ ಅವರ ಈ ಪ್ರತಿಭಟನಾ ಮೆರವಣಿಗೆ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಅಂತಿಮವಾಗಿ, ಮಾರ್ಚ್ 4, 2023ರಂದು, ಲೆ. ಗವರ್ನರ್ ಸರ್ಕಾರದ ಪ್ರಸ್ತಾವನೆಯನ್ನು ಅನುಮೋದಿಸಿದರೂ ಮುಂದೆ ಅಂತಹ ತರಬೇತಿ ಕಾರ್ಯಕ್ರಮ ನಡೆಸಬಾರದು ಎಂದು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಎಎಪಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.