Manish Sisodia, Vinai Saxena and Supreme Court A1
ಸುದ್ದಿಗಳು

ಅಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ, ಸಚಿವರ ಸಭೆಗಳಿಗೆ ಹಾಜರಾಗುತ್ತಿಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಸಿಸೋಡಿಯಾ ಅಳಲು

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ನೇಮಕದಿಂದ ಈ ಸಮಸ್ಯೆಗಳು ತೀವ್ರವಾಗಿವೆ ಎಂದು ತಿಳಿಸಿದ ಉಪಮುಖ್ಯಮಂತ್ರಿ.

Bar & Bench

ದೆಹಲಿಯ ಅಧಿಕಾರಿಗಳು ಆಮ್ ಆದ್ಮಿ ಪಕ್ಷ ಆಡಳಿತದ ಸರ್ಕಾರದೊಂದಿಗೆ ಸಹಕರಿಸುತ್ತಿಲ್ಲ, ಇದರಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಚುನಾಯಿತ ಸರ್ಕಾರದ ನೀತಿ ಮತ್ತು ಯೋಜನೆಗಳ ಜಾರಿಗೆ ಗರ ಬಡಿದಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಎಎಪಿ ಸಚಿವರು ಕರೆದ ಸಭೆಗಳಿಗೆ ಅಧಿಕಾರಿಗಳು ಹಾಜರಾಗುವುದನ್ನು ನಿಲ್ಲಿಸಿದ್ದಾರೆ ಮತ್ತು ಸಚಿವರ ದೂರವಾಣಿ ಕರೆಗಳಿಗೆ ಉತ್ತರಿಸುತ್ತಿಲ್ಲ. ದೆಹಲಿಯ ಹಾಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ನೇಮಕದಿಂದ ಈ ಸಮಸ್ಯೆಗಳು ತೀವ್ರವಾಗಿವೆ ಎಂದು ಸಿಸೋಡಿಯಾ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ.

ಇದು ಮೇ 21, 2021 ರಂದು ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯ ನೇರ ಪರಿಣಾಮವಾಗಿದ್ದು ಇದರಿಂದಾಗಿ ತಾವು ದೆಹಲಿಯ ಚುನಾಯಿತ ಸರ್ಕಾರಕ್ಕಲ್ಲ ಬದಲಿಗೆ ಬಿಜೆಪಿ ಆಡಳಿತವಿರುವ  ಕೇಂದ್ರ ಸರ್ಕಾರಕ್ಕೆ ಉತ್ತರದಾಯಿಗಳು ಎಂಬಂತಾಗಿದೆ ಎಂದಿದ್ದಾರೆ.

ದೆಹಲಿಯ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳ ಮೇಲೆ ಯಾವ ಸರ್ಕಾರ ಆಡಳಿತಾತ್ಮಕ ನಿಯಂತ್ರಣ ಹೊಂದಬೇಕು ಎಂಬುದರ ಕುರಿತು ಕೇಂದ್ರ ಮತ್ತು ದೆಹಲಿ ಸರ್ಕಾರಗಳ ನಡುವೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲಾಗಿದೆ.

ಕೇಂದ್ರ ಸರ್ಕಾರದ ಕೋರಿಕೆ ಮೇರೆಗೆ ಈ ವರ್ಷ ಮೇನಲ್ಲಿ ತ್ರಿಸದಸ್ಯ ಪೀಠ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ನಿರ್ಧರಿಸಿದ ಬಳಿಕ ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿದೆ.

"ದೆಹಲಿ ಸರ್ಕಾರದ ಹುದ್ದೆಗಳನ್ನು ನಿಯೋಜಿಸುವ ಅಧಿಕಾರ, ವರ್ಗಾವಣೆಗಳು ಮತ್ತು ನಾಗರಿಕ ಸೇವಕರನ್ನು ಶಿಸ್ತುಗೊಳಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ / ಲೆಫ್ಟಿನೆಂಟ್ ಗವರ್ನರ್ ನಿರ್ವಹಿಸುತ್ತಿದ್ದಾರೆ. ಈ ಅಧಿಕಾರವನ್ನು ದೋಷಯುಕ್ತ ಅಧಿಸೂಚನೆ ಮೂಲಕ ನೀಡಲಾಗಿದ್ದು ದೆಹಲಿಯ ಚುನಾಯಿತ ಸರ್ಕಾರದ ಬಗ್ಗೆ ಅಧಿಕಾರಿಗಳು ಅಸಡ್ಡೆ ತೋರುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ ಎಂದು ಅವರು ಹೇಳಿದ್ದಾರೆ.

ಅಧಿಕಾರಿಗಳು ಮತ್ತು ಚುನಾಯಿತ ಸರ್ಕಾರದ ನಡುವೆ ಯಾವುದೇ ಸಹಕಾರ ಕಂಡುಬಂದರೆ ದಂಡಿಸಲಾಗುತ್ತಿದೆ. ಚುನಾಯಿತ ಸರ್ಕಾರಕ್ಕೆ ಅಸಹಕಾರ ತೋರುವುದನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಿಸೋಡಿಯಾ ದೂರಿದ್ದಾರೆ.