Supreme Court
Supreme Court 
ಸುದ್ದಿಗಳು

ದೆಹಲಿ ಸೇವೆಗಳ ಸುಗ್ರೀವಾಜ್ಞೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ದೆಹಲಿ ಸರ್ಕಾರ

Bar & Bench

ರಾಷ್ಟ್ರ ರಾಜಧಾನಿಯಲ್ಲಿ ನಾಗರಿಕ ಸೇವಾ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಯ ಅಧಿಕಾರವನ್ನು ಲೆಫ್ಟಿನೆಂಟ್‌ ಗವರ್ನರ್‌ ಬಳಿ ಕೇಂದ್ರೀಕರಿಸುವ ದೆಹಲಿ ಸೇವೆಗಳ ಸುಗ್ರೀವಾಜ್ಞೆ ಪ್ರಶ್ನಿಸಿ ದೆಹಲಿ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ರಾಜಧಾನಿಯಲ್ಲಿ ಕೆಲಸ ಮಾಡುವ ನಾಗರಿಕ ಸೇವಾ ಅಧಿಕಾರಿಗಳ ಮೇಲಿನ ನಿಯಂತ್ರಣವನ್ನು ಚುನಾಯಿತ ಸರ್ಕಾರದಿಂದ ಕಸಿದು, ಅದನ್ನು ಚುನಾಯಿತರಲ್ಲದ ಲೆಫ್ಟಿನೆಂಟ್‌ ಗವರ್ನರ್‌ಗೆ ನೀಡಲಾಗಿದೆ ಎಂದು ಎಎಪಿ ನೇತೃತ್ವದ ಸರ್ಕಾರವು ಅರ್ಜಿಯಲ್ಲಿ ವಿವರಿಸಿದೆ.

“ಸಂವಿಧಾನಕ್ಕೆ ತಿದ್ದುಪಡಿ ಮಾಡದೇ ಸುಗ್ರೀವಾಜ್ಞೆಯಲ್ಲಿ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂವಿಧಾನದ 239ಎಎ ವಿಧಿಯಲ್ಲಿ ಚುನಾಯಿತ ಸರ್ಕಾರಕ್ಕೆ ಸೇವಾ ಸಂಬಂಧಿ ನಿಯಂತ್ರಣ ಮತ್ತು ಅಧಿಕಾರವನ್ನು ಕಲ್ಪಿಸಲಾಗಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಭಾರತೀಯ ಆಡಳಿತಾತ್ಮಕ ಸೇವಾ ಅಧಿಕಾರಿಗಳು ಸೇರಿ ಎಲ್ಲಾ ಸೇವೆಗಳ ಅಧಿಕಾರಿಗಳ ಮೇಲೆ ದೆಹಲಿ ಸರ್ಕಾರಕ್ಕೆ ನಿಯಂತ್ರಣವಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ವಾರದೊಳಗೆ ಕೇಂದ್ರ ಸರ್ಕಾರವು ಈ ಸುಗ್ರೀವಾಜ್ಞೆ ಹೊರಡಿಸಿತ್ತು.

ಚುನಾಯಿತ ಸರ್ಕಾರಗಳ ಆಡಳಿತವನ್ನು ಕೇಂದ್ರ ಸರ್ಕಾರ ಕಸಿದುಕೊಳ್ಳಲಾಗದು ಎಂದು ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಸ್ಪಷ್ಟಪಡಿಸಿತ್ತು. ಕಂದಾಯ, ಪೊಲೀಸ್‌ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳ ಮೇಲೆ ದೆಹಲಿ ಸರ್ಕಾರಕ್ಕೆ ನಿಯಂತ್ರಣವಿರಲಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.

ದೆಹಲಿ ಸೇವೆಗಳ ಸುಗ್ರೀವಾಜ್ಞೆಯು ಒಕ್ಕೂಟ, ಪ್ರಜಾಸತ್ತೀಯ ಆಡಳಿತ ಉಲ್ಲಂಘಿಸಲಿರುವುದರಿಂದ ಇದೊಂದು ಅಸಾಂವಿಧಾನಿಕ ಪ್ರಹಸನವಾಗಿದೆ. ಇದು ಸ್ವೇಚ್ಛೆಯಿಂದ ಕೂಡಿದ್ದು, ಸಾಂವಿಧಾನಿಕ ಪೀಠದ ತೀರ್ಪನ್ನು ಹಾಗೂ ಶಾಸನ ಸಭೆಯ ಅಧಿಕಾರವನ್ನು ಸುಗ್ರೀವಾಜ್ಞೆಯು ಮೀರುತ್ತಿದೆ. ಸಂವಿಧಾನದ 123ನೇ ವಿಧಿಯಡಿ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರವನ್ನು ಅಸಾಂವಿಧಾನಿಕವಾಗಿ ದುರುಪಯೋಗಪಡಿಸಿಕೊಂಡಿದೆ ಎಂದು ಅರ್ಜಿಯಲ್ಲಿ ವಿರೋಧಿಸಲಾಗಿದೆ.