Arvind Kejriwal, Delhi LG VK Saxena and Supreme Court 
ಸುದ್ದಿಗಳು

ದೆಹಲಿ ಸರ್ಕಾರ ವರ್ಸಸ್‌ ಎಲ್‌ಜಿ: ಸುಪ್ರೀಂ ತೀರ್ಪು ಮರುಪರಿಶೀಲನೆ ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರದ ಅರ್ಜಿ

ಚುನಾಯಿತ ರಾಜ್ಯ ಸರ್ಕಾರದ ಅಧಿಕಾರವನ್ನು ಕೇಂದ್ರ ಸರ್ಕಾರವು ತನ್ನ ತೆಕ್ಕೆಗೆ ತೆಗೆದುಕೊಳ್ಳಲಾಗದು ಎಂದು ಮೇ 11ರಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ತೀರ್ಪು ಪ್ರಕಟಿಸಿತ್ತು.

Bar & Bench

ಭೂಮಿ, ಪೊಲೀಸ್‌ ಮತ್ತು ಕಾನೂನು-ಸುವ್ಯವಸ್ಥೆ ಹೊರತುಪಡಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಭಾರತೀಯ ಆಡಳಿತ ಸೇವೆ (ಐಎಎಸ್‌) ಸೇರಿದಂತೆ ಎಲ್ಲಾ ಸೇವೆಗಳ ಮೇಲೆ ದೆಹಲಿ ಸರ್ಕಾರಕ್ಕೆ ನಿಯಂತ್ರಣ ಇರಲಿದೆ ಎಂದು ಈಚೆಗೆ ಸುಪ್ರೀಂ ಕೋರ್ಟ್‌ ನೀಡಿರುವ ಐತಿಹಾಸಿಕ ತೀರ್ಪನ್ನು ಮರುಪರಿಶೀಲಿಸಲು ಕೋರಿ ಕೇಂದ್ರ ಸರ್ಕಾರವು ಅರ್ಜಿ ಸಲ್ಲಿಸಿದೆ.

ಚುನಾಯಿತ ರಾಜ್ಯ ಸರ್ಕಾರದ ಅಧಿಕಾರವನ್ನು ಕೇಂದ್ರ ಸರ್ಕಾರವು ತನ್ನ ತೆಕ್ಕೆಗೆ ತೆಗೆದುಕೊಳ್ಳಲಾಗದು ಎಂದು ಮೇ 11ರಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ತೀರ್ಪು ಪ್ರಕಟಿಸಿತ್ತು.

“41ನೇ ನಮೂದಿನಡಿ ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರದ ಶಾಸನಾತ್ಮಕ ಅಧಿಕಾರ ಸಾರ್ವಜನಿಕ ಆಡಳಿತ ಸೇವೆಗೂ (ಐಎಎಸ್‌) ವಿಸ್ತರಣೆಯಾಗುತ್ತದೆ. ಈ ಅಧಿಕಾರಿಗಳು ದೆಹಲಿ ಸರ್ಕಾರದಿಂದ ನೇಮಕಗೊಳ್ಳದಿದ್ದರೂ ಅವರ ಮೇಲೆ ಅದು ನಿಯಂತ್ರಣ ಹೊಂದಿದೆ. ಆದಾಗ್ಯೂ, ಇದು ಭೂಮಿ, ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಸೇವೆಗಳಿಗೆ ಅನ್ವಯವಾಗುವುದಿಲ್ಲ. ಭೂಮಿ, ಪೊಲೀಸ್‌ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಹೊರತಾದ ಸೇವೆ ಹೊರತುಪಡಿಸಿ ಉಳಿದ ಆಡಳಿತಸೇವೆಗಳ ವಿಚಾರದಲ್ಲಿ ಲೆ. ಗವರ್ನರ್‌ ಅವರು ದೆಹಲಿ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿರುತ್ತಾರೆ” ಎಂದು ಸಿಜೆಐ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಎಂ ಆರ್‌ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ ಎಸ್‌ ನರಸಿಂಹ ಅವರ ನೇತೃತ್ವದ ಸಾಂವಿಧಾನಿಕ ಪೀಠವು ಈಚೆಗೆ ಒಮ್ಮತದ ತೀರ್ಪು ಪ್ರಕಟಿಸಿತ್ತು.

ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಿದ ಕೆಲವೇ ದಿನಗಳಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ದೆಹಲಿಯಲ್ಲಿ ಆಡಳಿತ ಸೇವೆ ಅಧಿಕಾರಿಗಳ ವರ್ಗಾವಣೆ, ನೇಮಕಾತಿ ಮತ್ತು ಶಿಸ್ತುಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುವ ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ಅಧಿಕಾರ ಕಲ್ಪಿಸಲು 'ರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ' ರಚಿಸಿ, ರಾಷ್ಟ್ರಪತಿಗಳ ಮೂಲಕ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಇದರ ಜೊತೆಗೆ ತೀರ್ಪು ಮರುಪಶೀಲನೆ ಕೋರಿ ಕೇಂದ್ರ ಸರ್ಕಾರವು ಅರ್ಜಿ ಸಲ್ಲಿಸಿದೆ.