ಮಾಲಿನ್ಯ ನಿಯಂತ್ರಿಸುವ ಸಲುವಾಗಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ 10 ವರ್ಷ ಹಳೆಯ ಡೀಸೆಲ್ ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ನಿಷೇಧಿಸಿ 2018ರಲ್ಲಿ ನೀಡಲಾಗಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಹಳೆಯ ವಾಹನ ನಿಷೇಧಿಸಿ 2018ರಲ್ಲಿ ನೀಡಲಾಗಿದ್ದ ಆದೇಶ ವೈಜ್ಞಾನಿಕ ವಿಶ್ಲೇಷಣೆಗಳನ್ನು ಆಧರಿಸಿಲ್ಲ. ತೀರ್ಪಿನಿಂದ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಿದೆ ಎಂದು ಎಂಸಿ ಮೆಹ್ತಾ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯಲ್ಲಿ ದೆಹಲಿ ಸರ್ಕಾರ ಗಮನ ಸೆಳೆದಿದೆ.
ಮಾಲಿನ್ಯ ನಿಯಂತ್ರಣದಲ್ಲಿ (ಪಿಯುಸಿ) ಪ್ರಮಾಣಪತ್ರ ಪಡೆಯುವ ವ್ಯಾಪ್ತಿ ಹಿಗ್ಗಿಸಿರುವುದು ಮತ್ತು ಭಾರತ್ ಸ್ಟೇಜ್-VI ಮಾನದಂಡಗಳ ಅನುಷ್ಠಾನದಂತಹ ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳು ಈಗ ಜಾರಿಯಲ್ಲಿವೆ. ನ್ಯಾಯಾಲಯ 2018ರಲ್ಲಿ ನೀಡಿದ ತೀರ್ಪಿನ ಬಳಿಕ 2020 ರಲ್ಲಿ BS-VI ಮಾಲಿನ್ಯ ನಿಯಂತ್ರಣ ಮಾನದಂಡಗಳ ಪಾಲನೆ ಕಡ್ಡಾಯಗೊಳಿಸಲಾಯಿತು ಎಂದು ಅರ್ಜಿ ಹೇಳಿದೆ.
"ಭಾರತ್ ಸ್ಟೇಜ್ VI ಎಂಜಿನ್‌ಗಳು ಗಮನಾರ್ಹವಾಗಿ ಕಡಿಮೆ ಮಾಲಿನ್ಯಕಾರಕವಾಗಿವೆ ... ಗೌರವಾನ್ವಿತ ನ್ಯಾಯಾಲಯದ 29.10.2018 ರಲ್ಲಿ ನೀಡಿದ್ದ ತೀರ್ಪು ಜಾರಿಯಲ್ಲಿದ್ದರೆ ಸಂಚಾರಕ್ಕೆ ಯೋಗ್ಯವಾದ, ಮಾಲಿನ್ಯರಹಿತ ಬಿ ಎಸ್-VI ವಾಹನಗಳು ಸಹ ಕೆಲವು ವರ್ಷಗಳಲ್ಲಿ ವೈಜ್ಞಾನಿಕ ಆಧಾರವಿಲ್ಲದೆ ರಸ್ತೆಗಿಳಿಯದಂತಾಗುತ್ತವೆ" ಎಂದು ಮನವಿ ವಿವರಿಸಿದೆ.
ಪ್ರಸ್ತುತ, ಶುದ್ಧ ಇಂಧನ ಲಭ್ಯವಿದ್ದು ಜೊತೆಗೆ ಮಾಲಿನ್ಯ ಕಡಿಮೆ ಮಾಡಲು ವಿದ್ಯುತ್ ವಾಹನಗಳ ಬಳಕೆ ಉತ್ತೇಜಿಸಲಾಗಿದೆ. 2018 ರ ನಿಷೇಧ ಮಾಲಿನ್ಯ ಮಾನದಂಡಗಳನ್ನು ಪಾಲಿಸುವ ವಾಹನಗಳ ಮಾಲೀಕರಾದ ದೆಹಲಿಯ ಹೆಚ್ಚಿನ ಸಂಖ್ಯೆಯ ಜನರಿಗೆ ಪ್ರಾಯೋಗಿಕ ತೊಂದರೆ ಉಂಟುಮಾಡಿದೆ. ಈ ವಾಹನಗಳು ಪ್ರತಿ ವರ್ಷ ಕಡಿಮೆ ಕಿಲೋಮೀಟರ್ ದೂರ ಕ್ರಮಿಸುತ್ತವೆ ಮತ್ತು ಒಟ್ಟಾರೆ ಮಾಲಿನ್ಯಕ್ಕೆ ಬಹಳ ಕಡಿಮೆ ಕೊಡುಗೆ ನೀಡುತ್ತವೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
ಅರ್ಜಿಯನ್ನು ಜುಲೈ 28 ರಂದು (ಸೋಮವಾರ) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಪೀಠ ಆಲಿಸಲಿದೆ.