ರಾಷ್ಟ್ರೀಯ ಕ್ರೀಡಾ ಸಂಹಿತೆ ಮತ್ತು ಮಾದರಿ ಚುನಾವಣಾ ಮಾರ್ಗಸೂಚಿಯ ಅನ್ವಯ ಭಾರತೀಯ ಬಾಸ್ಕೆಟ್‌ಬಾಲ್ ಒಕ್ಕೂಟಕ್ಕೆ (ಬಿಎಫ್‌ಐ) ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ ಕೃಷ್ಣ ಭಟ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ದೆಹಲಿ ಹೈಕೋರ್ಟ್ ಈಚೆಗೆ ನೇಮಕ ಮಾಡಿದೆ.
ಬಿಎಫ್‌ಐನ 2023-2027ರ ಅವಧಿಗೆ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಪುರುಶೈಂದ್ರ ಕುಮಾರ್ ಕೌರವ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಆದಷ್ಟು ಬೇಗ ಚುನಾವಣೆ ನಡೆಸಬೇಕು. ತಮ್ಮ ವಿವೇಚನೆಯ ಅನುಸಾರ ಆಡಳಿತಾಧಿಕಾರಿಯು ತಮ್ಮ ಸಂಭಾವನೆ ಪಡೆಯಬಹುದಾಗಿದ್ದು, ಇದನ್ನು ತಡಮಾಡದೇ ಬಿಎಫ್‌ಐ ಪಾವತಿಸಬೇಕು. ಆಡಳಿತಾಧಿಕಾರಿಗೆ ಆದಷ್ಟು ಬೇಗ ಚುನಾವಣೆ ನಡೆಸುವುದಕ್ಕಾಗಿ ಸಂಬಂಧಿತರೆಲ್ಲರೂ ಸಹಕರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಹಾಲಿ ಪದಾಧಿಕಾರಿಗಳು ಮುಂದುವರಿಯಬಹುದಾಗಿದ್ದು, ನ್ಯಾಯಾಲಯದ ಒಪ್ಪಿಗೆ ಪಡೆಯದೇ ಯಾವುದೇ ನೀತಿ-ನಿರೂಪಣೆ ಮಾಡುವಂತಿಲ್ಲ ಎಂದು ಫೆಬ್ರವರಿ 16ರಂದು ಮಾಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಇದೇ ವೇಳೆ ಅಮಾನತು ಮಾಡಿದೆ.
ಅರ್ಜಿದಾರರಲ್ಲಿ ಒಬ್ಬರಾದ ಪುದುಚೆರಿ ಬಾಸ್ಕೆಟ್‌ಬಾಲ್ ಸಂಸ್ಥೆಯು ಚುನಾವಣೆ ಮೇಲೆ ನಿಗಾ ಇಡಲು ನಿವೃತ್ತ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನು ನೇಮಕ ಮಾಡಬೇಕು ಎಂದು ಕೋರಿತ್ತು.
ನ್ಯಾ. ಕೃಷ್ಣ ಭಟ್ ಅವರು 2022ರ ಆಗಸ್ಟ್ 6ರಂದು ಕರ್ನಾಟಕ ಹೈಕೋರ್ಟ್ ಸೇವೆಯಿಂದ ನಿವೃತ್ತರಾಗಿದ್ದರು. 2020ರ ಮೇ 21ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾ. ಭಟ್ ಅವರು 2021ರ ಸೆಪ್ಟೆಂಬರ್ 25ರಂದು ಖಾಯಂಗೊಂಡಿದ್ದರು.