CLAT 2020, Delhi HC 
ಸುದ್ದಿಗಳು

ಆನ್‌ಲೈನ್ ಮೂಲಕ ಸಿಎಲ್ಎಟಿ- 2020 ಪರೀಕ್ಷೆ ನಡೆಸಲು ಕೋರಿ ದೆಹಲಿ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ

ಎಲ್ಲಾ 78 ಸಾವಿರ ಆಕಾಂಕ್ಷಿಗಳಿಗೆ ಸೂಕ್ತ ತಂತ್ರಜ್ಞಾನ, ಅಂತರ್ಜಾಲ ಸಂಪರ್ಕ, ಲ್ಯಾಪ್‌ಟಾಪ್ ಅಥವಾ ಡೆಸ್ಕ್ ಟಾಪ್ ಸೌಲಭ್ಯ ಇರುತ್ತದೆ ಎಂಬುದು ಅನುಮಾನ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

Bar & Bench

ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT 2020) ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಕೋರಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ಆಕಾಂಕ್ಷಿಗಳಲ್ಲಿ ಒಬ್ಬರಾದ ವಿ. ಗೋವಿಂದನ್ ರಮಣನ್ ಎಂಬುವವರು ಸಲ್ಲಿಸಿದ್ದ ಅರ್ಜಿಯಲ್ಲಿ ‘ಯಾವುದೇ ಸತ್ವವಿಲ್ಲ’ ಎಂಬ ಕಾರಣ ನೀಡಿ ಜಯಂತ್ ನಾಥ್ ಅವರಿದ್ದ ಏಕಸದಸ್ಯ ಪೀಠ ತಿರಸ್ಕರಿಸಿತು. ಅರ್ಜಿದಾರರು ಕಾನೂನು ಪದವೀಧರರಾಗಿದ್ದು ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶ ಬಯಸಿದ್ದರು. ತಮ್ಮ ಅನಾರೋಗ್ಯದ ಕಾರಣವನ್ನೂ ಮುಂದಿಟ್ಟು ಆನ್ಲೈನ್ ಪರೀಕ್ಷೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ’78,000 ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ನಡೆಸುವುದು ಅಸಾಧ್ಯದ ಮಾತಾಗಿದ್ದು ಹಾಗೆ ಮಾಡುವಾಗ ಹಲವು ರಾಜಿಗಳಿಗೆ ಮುಂದಾಗಬೇಕಾಗುತ್ತದೆ ಮತ್ತು ಆಕಾಂಕ್ಷಿಗಳು ಅಥವಾ ಕೋಚಿಂಗ್ ಕೇಂದ್ರಗಳು ಅಕ್ರಮ ಎಸಗುವ ಸಾಧ್ಯತೆ ಇರುತ್ತದೆ ಎಂದಿತು.

ಒಕ್ಕೂಟದ ವಾದ

· ಬೇರೆ ಕೇಂದ್ರಾಧಾರಿತ ಪರೀಕ್ಷೆಗಳ ವಿರುದ್ಧವಾಗಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಈಗಾಗಲೇ ತಿರಸ್ಕರಿಸಿದೆ.

· ಐಐಟಿ, ಜೆಇಇ, ನೀಟ್, ಕ್ಲಾಟ್ ಇತ್ಯಾದಿ ಪರೀಕ್ಷೆಗಳನ್ನು ಭೌತಿಕವಾಗಿ ನಡೆಸಲು ವಿವಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಅನುಮತಿ ನೀಡಿದೆ.

· ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಈ ಬಾರಿಯ ಸಿಎಲ್ಎಟಿ ಪರೀಕ್ಷೆ ನಡೆಸಿಕೊಡಲಾಗುವುದು.

ಮನೆಯಿಂದ ಆನ್ ಲೈನ್ ಪರೀಕ್ಷೆ ನಡೆಸುವುದು ಹಿಂದುಳಿದ ಪ್ರದೇಶಗಳು/ ಅಭ್ಯರ್ಥಿಗಳನ್ನು ತೀವ್ರ ಸಂಕಷ್ಟಕ್ಕೆ ತಳ್ಳುತ್ತದೆ.

ವಾದಗಳನ್ನು ಆಲಿಸಿದ ನ್ಯಾಯಾಲಯ ಪರೀಕ್ಷೆ ಆಯೋಜಿಸುವವರು ಹಲವು ರಾಜಿಗಳಿಗೆ ಮುಂದಾಗಬೇಕಾಗುತ್ತದೆ ಮತ್ತು ಆಕಾಂಕ್ಷಿಗಳು ಅಥವಾ ಕೋಚಿಂಗ್ ಸೆಂಟರುಗಳು ಅಕ್ರಮ ಎಸಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಲ್ಲದೆ ಎಲ್ಲಾ 78 ಸಾವಿರ ಆಕಾಂಕ್ಷಿಗಳಿಗೆ ಸೂಕ್ತ ತಂತ್ರಜ್ಞಾನ, ಅಂತರ್ಜಾಲ ಸಂಪರ್ಕ, ಲ್ಯಾಪ್‌ಟಾಪ್ ಅಥವಾ ಡೆಸ್ಕ್ಟಾಪ್ ಸೌಲಭ್ಯ ಇರುತ್ತದೆ ಎಂಬುದು ಅನುಮಾನ ಎಂದು ಅಭಿಪ್ರಾಯಪಟ್ಟಿತು.

“ಅರ್ಜಿದಾರರ ಮನವಿಗಳು ತಪ್ಪಾಗಿವೆ ಮತ್ತು ಪರೀಕ್ಷೆಗಳನ್ನು ಮುಂದೂಡಲು / ಪರೀಕ್ಷೆಯ ವಿಧವನ್ನು ಬದಲಿಸಲು ಸೂಕ್ತ ಆಧಾರ ಒದಗಿಸುತ್ತಿಲ್ಲ ಎಂಬುದು ಸ್ಪಷ್ಟವವಾಗಿದೆ. ಅರ್ಜಿದಾರರು 2016ರಲ್ಲಿ ಎಲ್ ಎಲ್ ಬಿ ಪೂರ್ಣಗೊಳಿಸಿದ್ದಾರೆ. ನಾಲ್ಕು ವರ್ಷಗಳ ಅಂತರದ ಬಳಿಕ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶಾವಕಾಶ ಕೋರಿದ್ದಾರೆ. ಅರ್ಜಿದಾರ ಪರೀಕ್ಷೆ ಬರೆಯಲು ನಾಲ್ಕು ವರ್ಷ ಕಾದಿದ್ದಾರೆ” ಎಂದು ಕೋರ್ಟ್ ಹೇಳಿತು.

ಅರ್ಜಿದಾರರ ಪರ ವಕೀಲರಾದ ಯುಧ್ವೀರ್ ಸಿಂಗ್ ಚೌಹಾನ್, ವಿಶಾಲ್ ದಾಬಸ್ ವಾದ ಮಂಡಿಸಿದರು. ಒಕ್ಕೂಟದ ಪ್ರತಿನಿಧಿಗಳಾಗಿ ಹಿರಿಯ ವಕೀಲ ದಯನ್ ಕೃಷ್ಣನ್ ಮತ್ತು ವಿನಾಯಕ ಮೆಹ್ರೋತ್ರ ಕಲಾಪದಲ್ಲಿ ಭಾಗವಹಿಸಿದ್ದರು.