Sudarshan TV- UPSC Jihad 
ಸುದ್ದಿಗಳು

ಬ್ರೇಕಿಂಗ್: ಸುದರ್ಶನ್ ಟಿವಿಯ “ಯುಪಿಎಸ್‌ಸಿ ಜಿಹಾದ್” ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿದ ಕೇಂದ್ರ ಸರ್ಕಾರಕ್ಕೆ ನೋಟಿಸ್

ಕೇಂದ್ರ ಸರ್ಕಾರ ಹಾಗೂ ಸುದರ್ಶನ್ ವಾಹಿನಿಗೆ ನೋಟಿಸ್ ಜಾರಿಗೊಳಿಸಿದ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನವೀನ್ ಚಾವ್ಲಾ ನೇತೃತ್ವದ ಏಕಸದಸ್ಯ ಪೀಠ.

Bar & Bench

ಸರ್ಕಾರಿ ಉದ್ಯೋಗಗಳಿಗೆ ಮುಸ್ಲಿಮರ “ಒಳನುಸುಳುವಿಕೆ” ಎಂಬ ಸುದರ್ಶನ್ ವಾಹಿನಿಯ ಕಾರ್ಯಕ್ರಮ ಪ್ರಸಾರಕ್ಕೆ ಒಪ್ಪಿಗೆ ನೀಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ (ಸಯ್ಯದ್ ಮುಜ್ತಾಬಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು).

ವಕೀಲ ಶಾದನ್ ಫರಾಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನವೀನ್ ಚಾವ್ಲಾ ನೇತೃತ್ವದ ಏಕಸದಸ್ಯ ಪೀಠವು ಕೇಂದ್ರ ಸರ್ಕಾರ ಹಾಗೂ ಸುದರ್ಶನ್ ವಾಹಿನಿಗೆ ನೋಟಿಸ್ ಜಾರಿ ಮಾಡಿತು. ಆದರೆ, ಕಾರ್ಯಕ್ರಮ ನಿರ್ಬಂಧಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ತಡೆಯಾಜ್ಞೆ ನೀಡಲಿಲ್ಲ.

ಸರ್ಕಾರಿ ಉದ್ಯೋಗದಲ್ಲಿ ಮುಸ್ಲಿಮರು ಒಳನುಸುಳುವುದರ ಹಿಂದಿನ ಪಿತೂರಿ “ಬಿಗ್ ಎಕ್ಸ್‌ ಪೋಸೆ” ಎನ್ನಲಾದ ಕಾರ್ಯಕ್ರಮದ ಪ್ರಸಾರಕ್ಕೆ ನಿರ್ಬಂಧ ವಿಧಿಸುವಂತೆ ಇದೇ ಅರ್ಜಿದಾರರು ಕಳೆದ ತಿಂಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಲೇವಾರಿ ಮಾಡಿತ್ತು.

ಉದ್ದೇಶಿತ ಕಾರ್ಯಕ್ರಮದ ಪ್ರಸಾರವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A (1), 153B (1), 295A ಮತ್ತು 499ರ ಅಡಿ ದ್ವೇಷ ಭಾಷೆ ಮತ್ತು ಕ್ರಿಮಿನಲ್ ಮಾನಹಾನಿಗೆ ತತ್ಸಮಾನವಾಗಿದ್ದು, ಕೇಬಲ್ ಟಿವಿ ನೆಟ್‌ವರ್ಕ್ (ನಿಯಂತ್ರಣ) ಕಾಯಿದೆ ಮತ್ತು ಅದರ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ವಾದಿಸಲಾಗಿದೆ.

ಉದ್ದೇಶಿತ ಕಾರ್ಯಕ್ರಮ ಪ್ರಸಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಈಗಾಗಲೇ ಸುದರ್ಶನ್ ವಾಹಿನಿಗೆ ನೋಟಿಸ್ ಜಾರಿಗೊಳಿಸಿರುವುದನ್ನು ಪರಿಗಣಿಸಿ ಇಲಾಖಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಮಂಜಸವಾದ ಕ್ರಮಕೈಗೊಳ್ಳುವಂತೆ ಪಕ್ಷಕಾರರಿಗೆ ನ್ಯಾಯಾಲಯ ಸೂಚಿಸಿತ್ತು.

ಅಲ್ಲಿಯವರೆಗೆ ಕಾರ್ಯಕ್ರಮ ಪ್ರಸಾರ ಮಾಡದಂತೆ ವಾಹಿನಿಗೆ ನ್ಯಾಯಾಲಯವು ನಿರ್ಬಂಧ ವಿಧಿಸಿತ್ತು. ಕಾರ್ಯಕ್ರಮ ಪ್ರಸಾರಕ್ಕೆ ಅನುಮತಿ ನೀಡಿರುವ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಚಲನಚಿತ್ರವು ಸಿಬಿಎಫ್‌ಸಿಯಿಂದ ಪ್ರಮಾಣ ಪತ್ರ ಪಡೆಯುತ್ತದೆ. ಆದರೆ ಟಿವಿ ಚಾನೆಲ್‌ಗಳಲ್ಲಿ ಕಾರ್ಯಕ್ರಮ ಪೂರ್ವ ಪ್ರಸರಣ ನಿರ್ಬಂಧವಿಲ್ಲ ಎಂದು ಹೇಳಿದೆ. ಒಂದೊಮ್ಮೆ ಕಾರ್ಯಕ್ರಮ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನಿನ ಅನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.