Arvind Kejriwal, ED and Delhi High Court 
ಸುದ್ದಿಗಳು

ಕೇಜ್ರಿವಾಲ್ ವಿರೋಧದ ನಡುವೆಯೂ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ದೆಹಲಿ ಹೈಕೋರ್ಟ್

ಈ ಹಿಂದೆ ವಿಚಾರಣಾ ನ್ಯಾಯಾಲಯ ಕೇಜ್ರಿವಾಲ್ ಅವರಿಗೆ ನೀಡಿದ್ದ ಜಾಮೀನು ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು.

Bar & Bench

ದೆಹಲಿ ಅಬಕಾರಿ ನೀತಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ತುರ್ತು ಆಧಾರದ ಮೇಲೆ ವಿಚಾರಣೆ ನಡೆಸುವಂತೆ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.

ಈ ಹಿಂದೆ ವಿಚಾರಣಾ ನ್ಯಾಯಾಲಯ ಕೇಜ್ರಿವಾಲ್ ಅವರಿಗೆ ನೀಡಿದ್ದ ಜಾಮೀನು ಆದೇಶ  ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್  ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು.

ಇ ಡಿ ಮನವಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ನೀಡಿದ್ದ ಪ್ರತಿಕ್ರಿಯೆಯ ಪ್ರತಿ ತಮಗೆ ನಿನ್ನೆ ತರಡರಾತ್ರಿ ದೊರೆತಿದೆ. ಹೀಗಾಗಿ ಪ್ರತ್ಯುತ್ತರ (ರಿಜಾಯಿಂಡರ್‌) ಅರ್ಜಿ ಸಲ್ಲಿಸಲು ಇ ಡಿಗೆ ಸಮಯ ಬೇಕಾಗುತ್ತದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ ವಿ ರಾಜು  ವಾದ ಮಂಡಿಸಿದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಪ್ರಕರಣದ ವಿಚಾರಣೆಯನ್ನು ಜುಲೈ 15ಕ್ಕೆ  ಮುಂದೂಡಿದರು.

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ  ಅವರು ಇ ಡಿ ವಾದವನ್ನು ಪ್ರಶ್ನಿಸಿದರು.ಕೇಜ್ರಿವಾಲ್‌ ಪ್ರತಿಕ್ರಿಯೆ ನೀಡಿರುವ ಪ್ರತಿಯನ್ನು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ತನಿಖಾ ಕಚೇರಿಗೆ (ಐಒ) ಮೇಲ್ ಮಾಡಲಾಗಿದೆ ಎಂದು ಸಿಂಘ್ವಿ ಹೇಳಿದರು.

ಕೇಜ್ರಿವಾಲ್‌ ಅವರಿಗೆ ನೀಡಲಾಗಿದ್ದ ಜಾಮೀನಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಸಿಂಘ್ವಿ ಪ್ರತಿಪಾದಿಸಿದರು. ಪ್ರತಿ-ಅಫಿಡವಿಟ್‌ ಅವಲಂಬಿಸದೆ ಪ್ರಕರಣದಲ್ಲಿ ವಾದ ಮಂಡಿಸಲು ಸಿದ್ಧ ಎಂಬುದಾಗಿಯೂ ಅವರು ಹೇಳಿದರು.

ಆದರೆ, ಕೇಜ್ರಿವಾಲ್ ಅವರ ಉತ್ತರಕ್ಕೆ ಮರುಪ್ರತಿಕ್ರಿಯೆ ಸಲ್ಲಿಸಲು ಇ ಡಿಗೆ ಅರ್ಹತೆ ಇದೆ ಎಂದು ಹೇಳಿದ ನ್ಯಾಯಮೂರ್ತಿ ಕೃಷ್ಣ ವಿಚಾರಣೆಯನ್ನು ಮುಂದೂಡಿದರು.

ಕೇಜ್ರಿವಾಲ್ ನ್ಯಾಯಾಲಯಕ್ಕೆ ಸಲ್ಲಿಸಿರುವ ತಮ್ಮ 30 ಪುಟಗಳ ಪ್ರತಿಕ್ರಿಯೆಯಲ್ಲಿ, ತಮಗೆ ಜಾಮೀನು ಮಂಜೂರು ಮಾಡಿದ ವಿಶೇಷ ನ್ಯಾಯಾಧೀಶೆ (ಪಿಸಿ ಆಕ್ಟ್) ನಿಯಾಯ್‌ ಬಿಂದು ವಿರುದ್ಧದ ಇ ಡಿ ಆರೋಪಗಳನ್ನು ನ್ಯಾಯಾಲಯ ತಿರಸ್ಕರಿಸಬೇಕು ಎಂದು ತಿಳಿಸಿದ್ದಾರೆ.

"ನ್ಯಾಯಾದೀಶರ ಬಗ್ಗೆ ಇ ಡಿ ಬಳಸಿರುವ ಭಾಷೆಯನ್ನು ಈ ಗೌರವಾನ್ವಿತ ನ್ಯಾಯಾಲಯವು ತಿರಸ್ಕರಿಸಬೇಕು. ಈ ಬಗೆಯ ಟೀಕೆಗಳು, ಆರೋಪಗಳು ನ್ಯಾಯದಾನಕ್ಕೆ ತೊಡಕಾಗುವುದು ಮಾತ್ರವೇ ಅಲ್ಲದೆ ಜಿಲ್ಲಾ ನ್ಯಾಯಾಂಗದ ಸ್ಥೈರ್ಯಗೆಡಿಸುತ್ತದೆ" ಎಂದು ಕೇಜ್ರಿವಾಲ್‌ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.