ದಿವಂಗತ ಉದ್ಯಮಿ ಸಂಜಯ್ ಕಪೂರ್ ಅವರ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅವರ ಮಾಜಿ ಪತ್ನಿ ಕರಿಷ್ಮಾ ಕಪೂರ್ ಮತ್ತು ತಾಯಿ ರಾಣಿ ಕಪೂರ್ ಅವರಿಗೆ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿರುವ ಸಂಜಯ್ ಕಪೂರ್ ಅವರ ಉಯಿಲನ್ನು ವಿಧಿವಿಜ್ಞಾನ ರೀತ್ಯಾ ಪರೀಕ್ಷೆಗೊಳಪಡಿಸಲು ದೆಹಲಿ ಹೈಕೋರ್ಟ್ ಅನುಮತಿಸಿದೆ.
ಜಂಟಿ ರಿಜಿಸ್ಟ್ರಾರ್ ಗಗನ್‌ದೀಪ್ ಜಿಂದಾಲ್ ಅವರು ಫೆಬ್ರವರಿ 26 ರಂದು ಹೊರಡಿಸಲಾದ ಆದೇಶದಲ್ಲಿ, ಕರಿಷ್ಮಾ ಮತ್ತು ರಾಣಿ ಕಪೂರ್ ಅಥವಾ ಅವರ ವಿಧಿವಿಜ್ಞಾನ ಮತ್ತು ಕೈಬರಹ ತಜ್ಞರು ಮಾರ್ಚ್ 10 ರಂದು ವಿಲ್ ಅನ್ನು ಪರಿಶೀಲಿಸಬಹುದು ಎಂದು ಹೇಳಿದ್ದಾರೆ.
"ವಾದಿಗಳು [ಕರಿಷ್ಮಾ ಕಪೂರ್ ಅವರ ಇಬ್ಬರು ಮಕ್ಕಳು] ಮತ್ತು ಪ್ರತಿವಾದಿ ಸಂಖ್ಯೆ 3 [ರಾಣಿ ಕಪೂರ್] ಅಥವಾ ಅವರ ಅಧಿಕೃತ ಮನವಿದಾರರು/ವಿಧಿ ವಿಜ್ಞಾನ ಅಥವಾ ಕೈಬರಹ ತಜ್ಞರ ಮೂಲಕ ರಿಜಿಸ್ಟ್ರಿಯೊಂದಿಗೆ ಮೊಹರು ಮಾಡಿದ ಕವರ್‌ನಲ್ಲಿ ಇರಿಸಲಾಗಿರುವ ದಿವಂಗತ ಸಂಜಯ್ ಕಪೂರ್ ಅವರ ಮೂಲ ವಿಲ್ ಅನ್ನು ಪರಿಶೀಲಿಸಲು ಅನುಮತಿಸಲಾಗಿದೆ. ನಿಯಮಗಳ ಪ್ರಕಾರ, ವಾದಿಗಳು ಮತ್ತು ಪ್ರತಿವಾದಿ ಸಂಖ್ಯೆ 3, 10.03.2026 ರಂದು ಮಧ್ಯಾಹ್ನ 03:00 ಗಂಟೆಗೆ ಪ್ರತಿವಾದಿ ಸಂಖ್ಯೆ 1 ಮತ್ತು 2 [ಪ್ರಿಯಾ ಕಪೂರ್] ಪರ ಅಧಿಕೃತ ವಕೀಲರ ಸಮ್ಮುಖದಲ್ಲಿ ಮೊಹರು ಮಾಡಿದ ಕವರ್‌ನಲ್ಲಿ ಇರಿಸಲಾಗಿರುವ ದಿವಂಗತ ಸಂಜಯ್ ಕಪೂರ್ ಅವರ ಮೂಲ ವಿಲ್ ಅನ್ನು ಪರಿಶೀಲಿಸಲು ರಿಜಿಸ್ಟ್ರಿ ಅವಕಾಶ ನೀಡುತ್ತದೆ. ಆದರೆ ಯಾವುದೇ ಪಕ್ಷವು ಮೊಹರು ಮಾಡಿದ ಕವರ್‌ನಲ್ಲಿ ಇರಿಸಲಾಗಿರುವ ಮೂಲ ವಿಲ್‌ನ ಛಾಯಾಚಿತ್ರ ಅಥವಾ ಪ್ರತಿಯನ್ನು ತೆಗೆದುಕೊಳ್ಳಲು ಅನುಮತಿಸುವುದಿಲ್ಲ" ಎಂದು ರಿಜಿಸ್ಟ್ರಾರ್ ಜಿಂದಾಲ್ ಆದೇಶಿಸಿದ್ದಾರೆ.
ಪ್ರಿಯಾ ಕಪೂರ್ ಅವರ ವಕೀಲರು ಸದರಿ ದಿನಾಂಕ ಮತ್ತು ಸಮಯದಲ್ಲಿ ಹಾಜರಾಗಲು ವಿಫಲವಾದರೆ, ಕರಿಷ್ಮಾ ಕಪೂರ್ ಮತ್ತು ರಾಣಿ ಕಪೂರ್ ಅವರ ಅನುಪಸ್ಥಿತಿಯಲ್ಲಿ ತಪಾಸಣೆ ನಡೆಸಲಾಗುವುದು ಎಂದು ಅವರು ಹೇಳಿದರು. ಕರಿಷ್ಮಾ ಕಪೂರ್ (ವಿಚ್ಛೇದನಕ್ಕೂ ಮುನ್ನ ಸಂಜಯ್ ಅವರ ಎರಡನೇ ಪತ್ನಿಯಾಗಿದ್ದವರು), ಪ್ರಸ್ತುತ ಅವರ ವಿಧವಾ ಪತ್ನಿಯಾಗಿರುವ ಪ್ರಿಯಾ ಕಪೂರ್ ಮತ್ತು ಸಂಜಯ್ ಅವರ ತಾಯಿ ರಾಣಿ ಕಪೂರ್ ಸೇರಿದಂತೆ ಕಪೂರ್ ಅವರ ಕುಟುಂಬದ ಹಲವು ಸದಸ್ಯರ ನಡುವಿನ ಕಾನೂನು ಹೋರಾಟದ ಕೇಂದ್ರಬಿಂದು ಈ ಉಯಿಲು ಆಗಿದೆ.
ಕರಿಷ್ಮಾ ಕಪೂರ್ ಅವರ ಮಕ್ಕಳು ಉಯಿಲಿನ ಅಧಿಕೃತತೆಯನ್ನು ಪ್ರಶ್ನಿಸಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಉಯಿಲಿನ ಪರಿಶೀಲನೆಯನ್ನು ಕೋರಿ ಸಲ್ಲಿಸಲಾದ ಎರಡು ಅರ್ಜಿಗಳನ್ನು ನಿರ್ಧರಿಸುವ ವೇಳೆ ನ್ಯಾಯಾಲಯವು ಈ ಆದೇಶವನ್ನು ನೀಡಿದೆ.
ವಿಚಾರಣೆಯ ವೇಳೆ, ಕರಿಷ್ಮಾ ಕಪೂರ್ ಪರ ವಕೀಲರು ದಾಖಲೆಯ ಪ್ರತಿಯನ್ನು ಮೊದಲೇ ಹಂಚಿಕೊಂಡಿದ್ದರೂ, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮೂಲ ಪ್ರತಿಯ ಪರಿಶೀಲನೆ ಅತ್ಯಗತ್ಯ ಎಂದು ವಾದಿಸಿದ್ದರು. ನಂತರದ ಹಂತದಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲು ಅವರು ವಿಧಿವಿಜ್ಞಾನ ಪರೀಕ್ಷೆಗೆ ಅನುಮತಿ ಕೋರಿದ್ದರು.
ಆದರೆ ಇದನ್ನು ಬಲವಾಗಿ ವಿರೋಧಿಸಿದ್ದ ಪ್ರಿಯಾ ಕಪೂರ್ ಪರ ವಕೀಲರು, ಮೂಲ ಉಯಿಲಿನ ಪರಿಶೀಲನೆ ಕೋರಿರುವ ಅರ್ಜಿಗಳು ನಿರ್ವಹಣಾ ಯೋಗ್ಯವಲ್ಲ. ವಿಧಿವಿಜ್ಞಾನ ಪರೀಕ್ಷೆಯನ್ನು ಸಾಕ್ಷ್ಯ ವಿಚಾರಣೆಗೊಳಪಡಿಸುವ ಹಂತಕ್ಕೆ ಮುಂದೂಡಬೇಕು ಎಂದು ಕೋರಿದ್ದರು. ಅಲ್ಲದೆ, ಉಯಿಲಿನ ಪರಿಶೀಲನೆ ಕೋರಿರುವ ಅರ್ಜಿಗಳನ್ನು ರಿಜಿಸ್ಟ್ರಾರ್ ನಿರ್ಣಯಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.
ಅದರೆ, ಈ ವಾದವನ್ನು ತಿರಸ್ಕರಿಸಿದ್ದ ನ್ಯಾಯಾಲಯವು ದಾಖಲೆಯನ್ನು ಮುಚ್ಚಿದ ಕವರ್‌ನಲ್ಲಿ ಇಟ್ಟ ಮಾತ್ರಕ್ಕೆ ದೆಹಲಿ ಹೈಕೋರ್ಟ್ (ಮೂಲ ವಿಭಾಗ) ನಿಯಮಗಳ ಅಡಿಯಲ್ಲಿ ಪರಿಶೀಲನೆಗೆ ಅವಕಾಶ ನೀಡುವ ರಿಜಿಸ್ಟ್ರಾರ್ ಅಧಿಕಾರವನ್ನು ಅದು ಮೊಟಕುಗೊಳಿಸುವುದಿಲ್ಲ ಎಂದು ಹೇಳಿ ಉಯಿಲಿನ ಪರಿಶೀಲನೆಯ ಕುರಿತು ರಿಜಿಸ್ಟ್ರಾರ್ ನಿರ್ಧರಿಸಲು ಅನುಮತಿಸಿತು.