Veera Dheera Sooran 
ಸುದ್ದಿಗಳು

ನಟ ವಿಕ್ರಮ್‌ ಸಿನಿಮಾ 'ವೀರ ದೀರ ಸೂರನ್‌' ಬಿಡುಗಡೆ: ಪಕ್ಷಕಾರರ ನಡುವಿನ ಸಂಧಾನಕ್ಕೆ ಸಮ್ಮತಿಸಿದ ದೆಹಲಿ ಹೈಕೋರ್ಟ್‌

ಮಾರ್ಚ್‌ 27ರಂದು ದೆಹಲಿ ಹೈಕೋರ್ಟ್‌ ಸಿನಿಮಾ ಬಿಡುಗಡೆಗೆ ನಿರ್ಬಂಧಿಸಿತ್ತು. ಪಕ್ಷಕಾರರು ಸಂಧಾನವಾದ ಹಿನ್ನೆಲೆಯಲ್ಲಿ ನಿರ್ಬಂಧ ತೆರವುಗೊಳಿಸಲಾಗಿದೆ.

Bar & Bench

ನಿರ್ಮಾಪಕರು ಮತ್ತು ಹಂಚಿಕೆದಾರರ ನಡುವೆ ಸಂಧಾನವಾದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ ಈಚೆಗೆ ನಟ ಚಿಯಾ ವಿಕ್ರಮ್‌ ಸಿನಿಮಾ ವೀರ ಧೀರ ಸೂರನ್‌ ಬಿಡುಗಡೆಗೆ ಅನುಮತಿಸಿದೆ.

ಐವಿ ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ (ಸಿನಿಮಾ ವಿತರಕರು) ಮತ್ತು ಎಚ್‌ಆರ್‌ ಪಿಕ್ಚರ್ಸ್‌ (ಚಿತ್ರ ನಿರ್ಮಾಪಕರು)  ನಡುವಿನ ಸಂಧಾನ ಒಪ್ಪಂದವನ್ನು ಒಪ್ಪಿ ನ್ಯಾಯಮೂರ್ತಿ ಮನಮೀತ್‌ ಪ್ರೀತಮ್‌ ಸಿಂಗ್‌ ಅರೋರಾ ಅವರ ಏಕಸದಸ್ಯ ಪೀಠವು ಚಿತ್ರ ಬಿಡುಗಡೆಗೆ ಅನುಮತಿಸಿದೆ.

ಇದಕ್ಕೂ ಮುನ್ನ, ನ್ಯಾಯಾಲಯವು ಚಿತ್ರ ಬಿಡುಗಡೆಗೆ ಪ್ರತಿಬಂಧಕಾದೇಶ ವಿಧಿಸಿತ್ತು. ಅದಾಗ್ಯೂ, ಆನಂತರ ಉಭಯ ಪಕ್ಷಕಾರರು ಒಟ್ಟಿಗೆ ನ್ಯಾಯಾಲಯದ ಮುಂದೆ ಪ್ರಕರಣವನ್ನು ಉಲ್ಲೇಖಿಸಿ, ಸಂಧಾನ ಮಾಡಿಕೊಂಡಿರುವುದನ್ನು ಪೀಠದ ಗಮನಕ್ಕೆ ತಂದಿದ್ದರಿಂದ ನಿರ್ಬಂಧಕ ಆದೇಶವನ್ನು 27.03.2025ರಿಂದಲೇ ಅನ್ವಯವಾಗುವಂತೆ ತೆರವುಗೊಳಿಸಿತು. ಈ ಹಿನ್ನೆಲೆಯಲ್ಲಿ ಚಿತ್ರ ತೆರೆಕಂಡಿದೆ.

“ಸಿನಿಮಾ ಬಿಡುಗಡೆಗೂ ಮುನ್ನ ಡಿಜಿಟಲ್‌, ಥಿಯಟ್ರಿಕಲ್‌ ಮತ್ತು ಇತರೆ ವಸ್ತುಗಳ ಹಕ್ಕು ಸ್ವಾಮ್ಯದ ಕುರಿತು ಸಿನಿಮಾ ನಿರ್ಮಾಪಕರು ಮತ್ತು ಹಂಚಿಕೆದಾರರ ನಡುವೆ ವಿವಾದ ಉದ್ಭವಿಸಿತ್ತು. ಸಿನಿಮಾ ಬಿಡುಗಡೆಗೂ ಹದಿನಾಲ್ಕು ದಿನ ಮುನ್ನ ಎಲ್ಲಾ ಹಕ್ಕುಗಳನ್ನು ತನಗೆ ನೀಡುವುದು ಎಚ್‌ ಆರ್‌ ಪಿಕ್ಚರ್ಸ್‌ನ ಹೊಣೆಗಾರಿಕೆಯಾಗಿದೆ ಎಂದು ಐವಿ ಎಂಟರ್‌ಟೈನ್‌ಮೆಂಟ್‌ ವಾದಿಸಿತ್ತು.

ಸಿನಿಮಾ ಬಿಡುಗಡೆಯ ಬಗ್ಗೆ ಐವಿಗೆ 2025ರ ಜನವರಿಗೂ ಮೊದಲೇ ತಿಳಿದಿತ್ತು. ಅದಾಗ್ಯೂ, ಹೆಚ್ಚಿನ ಹಣಕಾಸಿನ ಲಾಭ ಪಡೆಯಲು ಹಾಗೂ ನಿರ್ಮಾಪಕರ ಮೇಲೆ ಒತ್ತಡ ಹಾಕಲು ಐವಿ ನ್ಯಾಯಾಲಯದ ಮೆಟ್ಟಿಲೇರಿದೆ ಎಂದು ವಾದಿಸಿದರು.