ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿಚಾರಣೆಗೆ ನೀಡಲಾದ ಅನುಮತಿಯ ಮೂಲ ಕಡತ ಹಾಜರುಪಡಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ದೆಹಲಿ ಹೈಕೋರ್ಟ್ ಬುಧವಾರ ಸೂಚಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ತಮ್ಮನ್ನು ಆರೋಪಿಗಳೆಂದು ಹೆಸರಿಸಿದ್ದ ಪ್ರಾಸಿಕ್ಯೂಷನ್ ದೂರನ್ನು ಗಣನೆಗೆ ತೆಗೆದುಕೊಂಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಎಎಪಿ ನಾಯಕರು ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ರವೀಂದರ್ ದುಡೇಜಾ ಈ ಆದೇಶ ಹೊರಡಿಸಿದರು.
ಡಿಸೆಂಬರ್ 30, 2024 ರಂದು ಇ ಡಿಗೆ ಬರೆದ ಪತ್ರದಲ್ಲಿ ವಿಚಕ್ಷಣಾ ದಳದ ಉಪ ನಿರ್ದೇಶಕರು ಅನುಮತಿ ನೀಡಲಾಗಿದೆ ಎಂದು ದಾಖಲಿಸಿದ್ದಾರೆ. ಆದರೆ, ವಾಸ್ತವದಲ್ಲಿ ನಂತರವಷ್ಟೇ ಅನುಮತಿ ದೊರೆತಿದೆ. ಹೀಗಾಗಿ ಅನುಮತಿ ಪತ್ರದ ಮೂಲ ಕಡತ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ಕೋರಿಕೆಯ ಮೇರೆಗೆ, ನ್ಯಾಯಾಲಯವು ಸ್ಪಷ್ಟೀಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಅಫಿಡವಿಟ್ ಸಲ್ಲಿಸಲು ಇ ಡಿ ಗೆ ಅನುಮತಿಸಿತು. ಪ್ರಕರಣದ ಮುಂದಿನ ವಿಚಾರಣೆ 2026ರ ಜನವರಿ 21ರಂದು ನಡೆಯಲಿದೆ.
ವಿಚಾರಣೆ ವೇಳೆ ಹಿರಿಯ ವಕೀಲೆ ರೆಬೆಕಾ ಜಾನ್ ಅವರು ಸಿಬಿಐಗೆ ನೀಡಿದ ಅನುಮತಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಅನ್ವಯಿಸದು. ಅದು ಸಂಪೂರ್ಣ ಬೇರೆಯದೇ ಕಾನೂನು ಎಂದು ವಾದಿಸಿದರು. ದಿನಾಂಕಗಳಲ್ಲಿ ವ್ಯತ್ಯಾಸವಾಗಿರುವುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಕೇಜ್ರಿವಾಲ್ ಪರ ವಾದಿಸಿದ ಹಿರಿಯ ವಕೀಲ ಎನ್ ಹರಿಹರನ್ ತಮ್ಮ ಕಕ್ಷಿದಾರರ ವಿರುದ್ಧ ನಡೆದ ತನಿಖೆ ಸಂಪೂರ್ಣ ಅಕ್ರಮ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕು ಎಂದರು. ಇ ಡಿ ಪರ ವಿಶೇಷ ವಕೀಲ ಝೋಹೆಬ್ ಹೊಸೇನ್ ಅವರು ಈ ಕುರಿತು ಪರಿಶೀಲಿಸುವುದಾಗಿ ಹೇಳಿದರು. ಈ ಹಂತದಲ್ಲಿ ಕಡತ ಹಾಜರುಪಡಿಸುವಂತೆ ನ್ಯಾಯಾಲಯ ತಾಕೀತು ಮಾಡಿತು.