ರಾಷ್ಟ್ರ ರಾಜಧಾನಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುಮಾಲಿನ್ಯ ವಿಕೋಪಕ್ಕೆ ಹೋಗಿರುವ ಬೆನ್ನಲ್ಲಿಯೇ ಗಾಳಿ ಶುದ್ಧೀಕರಿಸುವ ಏರ್ ಪ್ಯೂರಿಫಯರ್ ಯಂತ್ರಗಳನ್ನು 'ವೈದ್ಯಕೀಯ ಸಾಧನ' ಎಂದು ಘೋಷಿಸಿ, ಅದಕ್ಕೆ 18% ಜಿಎಸ್‌ಟಿ ಬದಲು 5% ಜಿಎಸ್‌ಟಿ ವಿಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಪ್ರಕರಣದ ಸಂಬಂಧ ಶೀಘ್ರವೇ ಸಭೆ ಸೇರುವಂತೆ ಜಿಎಸ್‌ಟಿ ಮಂಡಳಿಗೆ ಆದೇಶಿಸಿದೆ [ಕಪಿಲ್ ಮದನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಡಿಸೆಂಬರ್‌ನಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಯೊಂದು ಸಲ್ಲಿಸಿದ ವರದಿಯಲ್ಲಿ, ಸರ್ಕಾರ ಸಹಾನುಭೂತಿಯಿಂದ ವಾಯು ಶುದ್ಧೀಕರಣ ಯಂತ್ರ ಅಥವಾ ಅವುಗಳಲ್ಲಿ ಬಳಸುವ ಹೆಪಾ ಫಿಲ್ಟರ್‌ಗಳ ಮೇಲಿನ ಜಿಎಸ್‌ಟಿ ರದ್ದುಪಡಿಸಬೇಕು ಅಥವಾ ಕಡಿಮೆ ಮಾಡಬೇಕು ಎಂದು ಶಿಫಾರಸು ಮಾಡಿರುವುದನ್ನು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರನ್ನೊಳಗೊಂಡ ವಿಭಾಗೀಯ ಪೀಠದ ಗಮನಕ್ಕೆ ತರಲಾಯಿತು.
ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ದುಸ್ಥಿತಿಯಲ್ಲಿರುವುದನ್ನು ಮನಗಂಡು, ಜಿಎಸ್‌ಟಿ ಮಂಡಳಿ ಸಾಧ್ಯವಾದಷ್ಟು ಬೇಗ ಸಭೆ ನಡೆಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಜಿಎಸ್‌ಟಿಯನ್ನು ಕಡಿಮೆ ಮಾಡುವ ಅಥವಾ ರದ್ದುಪಡಿಸುವ ಪ್ರಕರಣವನ್ನು ಜಿಎಸ್‌ಟಿ ಮಂಡಳಿ ಶೀಘ್ರದಲ್ಲೇ ಪರಿಗಣಿಸಬೇಕು ಎಂದು ನಾವು ನಿರ್ದೇಶಿಸುತ್ತೇವೆ. ಜಿಎಸ್‌ಟಿ ಮಂಡಳಿ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಸಭೆ ಕರೆಯಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂಬುದು ತಿಳಿದಿದೆ. ಆದರೆ ದೆಹಲಿ ಹಾಗೂ ಸಮೀಪದ ಪ್ರದೇಶಗಳ ವಾಯು ಗುಣಮಟ್ಟ ಗಮನಿಸಿ, ಜಿಎಸ್‌ಟಿ ಮಂಡಳಿ ಶೀಘ್ರದಲ್ಲೇ ಸಭೆ ನಡೆಸುವುದು ಸೂಕ್ತವೆಂದು ಭಾವಿಸುತ್ತೇವೆ" ಎಂದು ಆದೇಶದಲ್ಲಿ ಹೇಳಲಾಗಿದೆ.
ಜಿಎಸ್‌ಟಿ ಮಂಡಳಿ ಎಷ್ಟು ಬೇಗ ಸಭೆ ನಡೆಸಬಹುದು ಎಂಬ ಕುರಿತು ಸೂಚನೆಗಳನ್ನು ಪಡೆಯುವಂತೆ ಸರ್ಕಾರದ ಪರ ವಕೀಲರಾದ ಆಕಾಶ್ ಪನ್ವಾರ್ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
"ಮಂಡಳಿ ಎಷ್ಟು ಬೇಗ ಸಭೆ ನಡೆಸಬಹುದು ಎಂಬ ಮಾಹಿತಿ ಪಡೆಯಲು ಸಂಬಂಧಪಟ್ಟ ವಕೀಲರಿಗೆ ಅವಕಾಶ ನೀಡುತ್ತಿದ್ದು, ಪ್ರಕರಣವನ್ನು ಡಿಸೆಂಬರ್ 26ರಂದು ಪಟ್ಟಿ ಮಾಡಿ. ಮಂಡಳಿ ಸಭೆಯನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದಿದ್ದರೆ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೂ ನಡೆಸಬಹುದಾಗಿದೆ" ಎಂದು ಪೀಠ ಸಲಹೆ ನೀಡಿತು.
ದೆಹಲಿಯಲ್ಲಿ ತೀವ್ರ ವಾಯುಮಾಲಿನ್ಯದಿಂದ ಉಂಟಾಗಿರುವ “ಅತೀ ಗಂಭೀರ ತುರ್ತು ಪರಿಸ್ಥಿತಿ ಗಮನಿಸಿ ಏರ್ ಪ್ಯೂರಿಫಯರ್‌ಗಳನ್ನು ಐಷಾರಾಮಿ ವಸ್ತುಗಳೆಂದು ವರ್ಗೀಕರಿಸಬಾರದು ಎಂದು ವಕೀಲ ಕಪಿಲ್ ಮದನ್ ಸಲ್ಲಿಸಿರುವ ಅರ್ಜಿ ತಿಳಿಸಿತ್ತು. ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ವಿಕೋಪಕ್ಕೆ ತಿರುಗಿರುವ ಹೊತ್ತಿನಲ್ಲಿಯೇ ಅರ್ಜಿ ಮಹತ್ವ ಪಡೆದುಕೊಂಡಿತ್ತು.
ಮನುಷ್ಯ ಪ್ರತಿದಿನ 21,000 ಬಾರಿ ಉಸಿರಾಡುತ್ತಾನೆ. ನಾಗರಿಕರಿಗೆ ಶುದ್ಧ ಗಾಳಿ ಒದಗಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ವಾಯು ಶುದ್ಧೀಕರಣ ಯಂತ್ರಗಳ ಮೇಲೆ ವಿಧಿಸಿರುವ 18% ಜಿಎಸ್‌ಟಿಯನ್ನಾದರೂ ಸರ್ಕಾರ ಹದಿನೈದು ದಿನಗಳ ಮಟ್ಟಿಗೆ ಕಡಿಮೆ ಮಾಡಬೇಕು ಎಂದು ದೆಹಲಿ ಹೈಕೋರ್ಟ್ ಬೆಳಗಿನ ವಿಚಾರಣೆ ವೇಳೆ ತಿಳಿಸಿತು. ಪ್ರಕರಣದಲ್ಲಿ ಸರ್ಕಾರದಿಂದ ಸೂಚನೆಗಳನ್ನು ಪಡೆದು ಮಧ್ಯಾಹ್ನ 2.30ಕ್ಕೆ ನ್ಯಾಯಾಲಯಕ್ಕೆ ತಿಳಿಸುವಂತೆ ಪೀಠ ಸರ್ಕಾರಿ ವಕೀಲರಿಗೆ ನಿರ್ದೇಶನ ನೀಡಿತು. ಮಧ್ಯಾಹ್ನವೂ ವಿಚಾರಣೆ ನಡೆಯಿತು.