ವಿವಿಧ ಜಿಲ್ಲಾ ನ್ಯಾಯಾಲಯಗಳ ನ್ಯಾಯವಾದಿಗಳ ಸಂಘಗಳ ಸಮನ್ವಯ ಸಮಿತಿ ಮಂಡಿಸಿರುವ ವಕೀಲರ ಸಂರಕ್ಷಣಾ ಮಸೂದೆಯ ಕರಡನ್ನು ಪರಿಗಣಿಸುವಂತೆ ಮತ್ತು ಭಾಗೀದಾರರೊಂದಿಗೆ ಸಮಾಲೋಚನೆ ನಡೆಸುವಂತೆ ದೆಹಲಿ ಹೈಕೋರ್ಟ್ ಗುರುವಾರ ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರಕ್ಕೆ (ಜಿಎನ್‌ಟಿಸಿಡಿ) ನಿರ್ದೇಶನ ನೀಡಿದೆ.
ಕರಡು ಮಸೂದೆಯ ಪರಿಶೀಲನೆ ಮತ್ತು ಸಮಾಲೋಚನೆಯ ನಂತರ ಕೈಗೊಳ್ಳಲಾದ ಕ್ರಮಗಳ ಕುರಿತು ವರದಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಆದೇಶಿಸಿದ್ದಾರೆ. ಮಸೂದೆಯ ಕರಡನ್ನು ಮೇ 15ರಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕಳುಹಿಸಲಾಗಿದೆ.
ರಾಷ್ಟ್ರ ರಾಜಧಾನಿಗೆ ವಕೀಲರ ಸಂರಕ್ಷಣಾ ಕಾಯಿದೆಯನ್ನು ಜಾರಿಗೊಳಿಸುವಂತೆ ಕೋರಿ ವಕೀಲರಾದ ದೀಪಾ ಜೋಸೆಫ್ ಮತ್ತು ಆಲ್ಫಾ ಫಿರಿಸ್ ದಯಾಳ್ ಅವರು ಸಲ್ಲಿಸಿದ ಮನವಿಯ ವಿಚಾರಣೆ ವೇಳೆ ನ್ಯಾ. ಪ್ರತಿಭಾ ಈ ವಿಚಾರ ತಿಳಿಸಿದ್ದಾರೆ.
ದೇಶದ ವಿವಿಧೆಡೆ ವಕೀಲರ ಮೇಲೆ ದಾಳಿ, ಹಲ್ಲೆ, ಹತ್ಯೆಯಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶದಲ್ಲಿ ವಕೀಲರ ರಕ್ಷಣಾ ಮಸೂದೆ ಮಂಡಿಸಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.